ಸಾಧಕರಿಗೆ ರೋಟರಿ ಶಿವಮೊಗ್ಗ ಪೂರ್ವದಿಂದ ಸನ್ಮಾನ

ಶಿವಮೊಗ್ಗ.ಜ.೧೨: ಸಾಹಿತ್ಯ, ಸಂಸ್ಕೃತಿ, ಕಲೆ, ಕಲಾವಿದರ ತವರೂರು ಶಿವಮೊಗ್ಗ ಜಿಲ್ಲೆ ಆಗಿದ್ದು, ಸಾಕಷ್ಟು ಕಲಾವಿದರು ಜಿಲ್ಲೆಯಿಂದ ರಾಷ್ಟ್ರ ಮಟ್ಟದಲ್ಲಿ ಸ್ಥಾನ ಗಳಿಸಿದ್ದಾರೆ ಎಂದು ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಸುಮತಿ ಕುಮಾರಸ್ವಾಮಿ ಹೇಳಿದರು.ಶಿವಮೊಗ್ಗ ನಗರದಲ್ಲಿ ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭದ್ರಾವತಿಯ ಹೆಮ್ಮೆಯ ಸುಗಮ ಸಂಗೀತ ಗಾಯಕ, ಆಕಾಶವಾಣಿ, ದೂರದರ್ಶನ ಕಲಾವಿದ ವಸಂತ ಮಾಧವ ಹಾಗೂ ಮಂಜುಳಾ ಧೃವರಾಜ್ ಅವರನ್ನು ಸನ್ಮಾನಿಸಿ ಮಾತನಾಡಿದರು.
ಸುಗಮ ಸಂಗೀತ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ ವಸಂತ ಮಾಧವ ಅವರು ರಾಜ್ಯ, ರಾಷ್ಟ್ರ ಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಜಿಲ್ಲೆಯ ಕೀರ್ತಿ ಹೆಚ್ಚಿಸಿದ ಸಾಧಕರಲ್ಲಿ ಇವರು ಕೂಡ ಒಬ್ಬರು ಎಂದು ತಿಳಿಸಿದರು.ವಲಯ ಸಹಾಯಕ ಗವರ್ನರ್ ಡಾ. ಗುಡದಪ್ಪ ಕಸಬಿ ಮಾತನಾಡಿ, ಕಲೆ, ಸಂಗೀತ ಸಾಧಕನ ಸ್ವತ್ತಾಗಿದ್ದು, ನಿರಂತರ ಪರಿಶ್ರಮದಿಂದ ಸಾಧನೆ ಸಾಧ್ಯ. ಸಂಗೀತ ಅಭ್ಯಾಸದಿಂದ ಧನಾತ್ಮಕವಾಗಿ ಮನೋಸಾಮಾರ್ಥ್ಯ ವೃದ್ಧಿ ಆಗುತ್ತದೆ. ಸಂಗೀತಕ್ಕೆ ವಿಶೇಷ ಶಕ್ತಿ ಇದೆ ಎಂದರು.ತುಂತುರು ಸಭಾಂಗಣದಲ್ಲಿ ಆಯೋಜಿಸಿದ್ದ ಕುಟುಂಬ ಮಿಲನ ಹಾಗೂ ಸಂಗೀತ ಸಂಜೆ ಹಾಗೂ ಗಾಯನ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಆಕಾಶವಾಣಿ, ದೂರದರ್ಶನ ಕಲಾವಿದರು ಹಾಗೂ ವಿವಿಧ ಧ್ವನಿಮುದ್ರಣಗಳಲ್ಲಿ ಹಾಡಿದ ಗಾಯಕರಾದ ವಸಂತ ಮಾಧವ ಹಾಗೂ ಮಂಜುಳಾ ಧೃವರಾಜ್, ಜಿ.ವಿಜಯ್‌ಕುಮಾರ್ ಅವರಿಂದ ಗಾನಸುಧೆ ನಡೆಯಿತು.ಮಾಜಿ ಸಹಾಯಕ ಗವರ್ನರ್ ಚಂದ್ರಹಾಸ ಪಿ ರಾಯ್ಕರ, ಸುಬ್ಬೇಗೌಡ, ಜಿ.ವಿಜಯ್‌ಕುಮಾರ್, ಕಡಿದಾಳ್ ಗೋಪಾಲ್, ವಸಂತ್ ಹೋಬ್ಳಿದಾರ್, ರವೀಂದ್ರನಾಥ ಐತಾಳ್, ಕುಮಾರಸ್ವಾಮಿ, ಬೆನಕಪ್ಪ, ಇನ್ನರ್‌ವ್ಹೀಲ್ ಅಧ್ಯಕ್ಷೆ ಮಧುರಾ ಮಹೇಶ್, ಬಿಂದು ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.