ಸಾಧಕರನ್ನು ಗೌರವಿಸುವುದು ಬಿಜೆಪಿ ಸಂಸ್ಕೃತಿ

ಗೌರಿಬಿದನೂರು, ಮಾ.೩- ಬಿಜೆಪಿ ಸರ್ಕಾರ ಎಲೆಮರೆಕಾಯಿಯಂತೆ ಇರುವ ಪ್ರತಿಭಾವಂತರು ಮತ್ತು ಸಾಧಕ ಕಲಾವಿದರನ್ನು ಗುರುತಿಸಿ ಗೌರವಿಸುವುದು ಸಂಸ್ಕೃತಿಯಾಗಿದೆ ಎಂದು ರಾಜ್ಯ ದ್ರಾಕ್ಷಿ ಮತ್ತು ವೈನ್ ಬೋರ್ಡ್ ಅಧ್ಯಕ್ಷರಾದ ಎನ್.ಎಂ.ರವಿನಾರಾಯಣರೆಡ್ಡಿ ಹೇಳಿದರು.
ನಗರದಲ್ಲಿ ಬಿಜೆಪಿ, ದಲಿತ ಸಂಘಟನೆಗಳು ಹಾಗೂ ಅಲ್ಪ ಸಂಖ್ಯಾತರ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಪದ್ಮಶ್ರೀ ಪುರಸ್ಕೃತ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಹಾಗೂ ಖಾದರ್ ವಲಿ ಅವರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಅರ್ಹ ಪ್ರತಿಭೆಗಳಿಗೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಗೌರವ ಮತ್ತು ಮನ್ನಣೆಗಳು ದೊರೆಯುತ್ತಿದೆ. ಇದರಿಂದಾಗಿ ಸುಪ್ತವಾಗಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದಲ್ಲದೆ, ಗ್ರಾಮೀಣ ಭಾಗದಲ್ಲಿನ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಅಭಿನಂದಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ನಾವೆಲ್ಲರೂ ಪ್ರಧಾನಿಯವರ ಕೈ ಬಲಪಡಿಸಿದಲ್ಲಿ ಮುಂದಿನ ದಿನಮಾನಗಳಲ್ಲಿ ನಿಜವಾದ ರಾಮರಾಜ್ಯ ಕಾಣಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮಾನಸ ಸಮೂಹ ಆಸ್ಪತ್ರೆಗಳ ಮುಖ್ಯಸ್ಥರಾದ ಡಾ.ಎಚ್.ಎಸ್.ಶಶಿಧರ್ ಮಾತನಾಡಿ, ಪ್ರಶಸ್ತಿ ಮತ್ತು ಪುರಸ್ಕಾರಗಳು ಅರ್ಹರಿಗೆ ಸೇರಿದಾಗ ಮಾತ್ರ ಅದಕ್ಕೆ ನಿಜವಾದ ಮೌಲ್ಯ ಮತ್ತು ಸಾರ್ಥಕತೆ ಸಿಗಲಿದೆ. ಅಂತಹ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿರುವುದು ಸಂತಸದ ವಿಚಾರವಾಗಿದೆ. ಈ ಹಿಂದೆ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಅರ್ಜಿ ಹಾಕುವ ಹಾಗೂ ಲಾಬಿ ನಡೆಸುವ ಸಂಸ್ಕೃತಿ ಇತ್ತು. ಆದರೆ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಆ ಸಂಸ್ಕೃತಿಗೆ ತಿಲಾಂಜಲಿ ಇಡಲಾಗಿದೆ. ಸಮಾಜಕ್ಕೆ ಗಣನೀಯ ಸೇವೆ ಸಲ್ಲಿಸಿದ ಹಾಗೂ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸುತ್ತಿದೆ. ಕಳೆದ ಬಾರಿ ರಾಜ್ಯದ ಸಾಲುಮರದ ತಿಮ್ಮಕ್ಕ ಹಾಗೂ ಹರಕೇಳ ಹಾಜಬ್ಬ ಜಾನಪದ ಕಲಾವಿದೆ ತುಳಸಿ ಗೌಡ ಅವರಂತಹವರನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು, ಈ ಬಾರಿ ನಮ್ಮ ಜಿಲ್ಲೆಯ ಜಾನಪದ ಕಲಾವಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಅವರನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ಜತೆಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅದೇ ರೀತಿ ಸಿರಿಧಾನ್ಯಗಳ ಆಹಾರ ತಜ್ಞ ಡಾ.ಖಾದರ್ ವಲಿ ಅವರು ಆಹಾರ ಪದ್ಧತಿ ಹಾಗೂ ಸಿರಿಧಾನ್ಯಗಳ, ಬಳಕೆಯ ಮಹತ್ವದ ಬಗ್ಗೆ ಜನ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇಬ್ಬರಿಗೂ ಪದ್ಮಶ್ರೀ ದೊರೆತಿರುವುದು ಸಾರ್ಥಕತೆ ನೀಡಿದೆ ಎಂದು ಹೇಳಿದರು.