ಸಾಣೇಹಳ್ಳಿಯಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ರಥೋತ್ಸವ

ಸಂಜೆವಾಣಿ ವಾರ್ತೆ

ಸಾಣೇಹಳ್ಳಿ, ಏ. 27; ಇಲ್ಲಿನ ಶ್ರೀ ಶಿವಕುಮಾರ ಸ್ವಾಮೀಜಿ ರಥೋತ್ಸವ ಸಮಿತಿಯವರು ಪ್ರತಿವರ್ಷದಂತೆ ಏ 28 ರಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಸಾನ್ನಿಧ್ಯದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ರಥೋತ್ಸವವನ್ನು ಆಯೋಜಿಸಿದ್ದಾರೆ.ಸಾಣೇಹಳ್ಳಿ ಪುಟ್ಟ ಗ್ರಾಮವಾದರೂ ಇಲ್ಲಿ ವರ್ಷದುದ್ದಕ್ಕೂ ಸಾಹಿತ್ಯ, ಸಂಗೀತ, ಕಲೆ, ಕೃಷಿ, ಧರ್ಮಕ್ಕೆ ಸಂಬಂಧಿಸಿದ ಚಟುವಟಿಕೆಗಳು ನಡೆಯುತ್ತಿರುತ್ತವೆ. ಸಾಣೇಹಳ್ಳಿಗೆ ಒಂದು ಘನತೆ ಬರುವಂತೆ ಮಾಡಿದವರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು. ಅವರು 1977ರಲ್ಲಿ ಸಾಣೇಹಳ್ಳಿ ಮಠಕ್ಕೆ ಶ್ರೀ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮಿಗಳನ್ನು ಪಟ್ಟಾಧ್ಯಕ್ಷರನ್ನಾಗಿ ಮಾಡಿದರು. ಕುಗ್ರಾಮವಾಗಿ, ಅನಾಮಧೇಯ ಹಳ್ಳಿಯಾಗಿದ್ದ ಸಾಣೇಹಳ್ಳಿ ಅಂದಿನಿAದಲೇ ಚೈತನ್ಯ ಪಡೆದುಕೊಂಡು ಸಾಂಸ್ಕೃತಿಕ ಹಳ್ಳಿಯಾಗಿ ಹೆಸರುವಾಸಿಯಾಗಿದೆ. ತಮ್ಮ ಬದುಕಿಗೆ ಬೆಳಕು ನೀಡಿದ ಗುರುವಿನ ಹೆಸರಿನಲ್ಲಿ ರಥೋತ್ಸವ ಮಾಡಬೇಕು ಎನ್ನುವ ಆಶಯವನ್ನು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಗ್ರಾಮಸ್ಥರೆದುರು ವ್ಯಕ್ತಪಡಿಸಿದರು. “ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ” ಎನ್ನುವಂತಾಯ್ತು. ಅವರ ಆಶಯವನ್ನ ಗ್ರಾಮಸ್ಥರು ನೆರವೇರಿಸಿದರು. ಸುಂದರವಾದ ರಥ ನಿರ್ಮಾಣವಾಯ್ತು. ಅದಕ್ಕೆ “ಶ್ರೀ ಶಿವಕುಮಾರ ರಥ” ಎಂದೇ ನಾಮಕರಣ ಮಾಡಿದೆ. ಕಳೆದ ಹತ್ತಾರು ವರ್ಷಗಳಿಂದ ಈ ರಥೋತ್ಸವ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಜನ್ಮತಾಳಿದ ದಿನ ಏಪ್ರಿಲ್ 28ರಂದೇ ಪ್ರತಿವರ್ಷ ನಡೆಯುವುದು. ಪ್ರತಿವರ್ಷ ತಾಲ್ಲೂಕಿನ ಬೇರೆ ಬೇರೆ ಗ್ರಾಮಗಳ ಭಕ್ತರು ರಥೋತ್ಸವದ ಜವಾಬ್ದಾರಿ ನಿರ್ವಹಿಸುವರು. ರಥೋತ್ಸದ ಸಂದರ್ಭದಲ್ಲಿ ಪುಸ್ತಕಗಳ ಹರಾಜು ನಡೆಯುವುದು. ನಂತರ ಗುರುಗಳಿಗೆ ಪ್ರಿಯವಾದ ವಚನಗೀತೆ, ನಾಟಕದ ಮೂಲಕ ಗುರುಗಳ ಸ್ಮರಣೆ ಅರ್ಥಪೂರ್ಣವಾಗಿ ನಡೆಯುವುದು. 2024 ಏ. 28ರ ಅಪರಾಹ್ನ 4 ಗಂಟೆಗೆ ರಥೋತ್ಸವ ಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಸಮ್ಮುಖದಲ್ಲಿ ನಡೆಯುವುದು. ನಂತರ ಸಾರ್ವಜನಿಕ ಸಭೆ ಸಂಜೆ 5:30ಕ್ಕೆ ನಡೆಯಲಿದೆ. ಹೊಳಲ್ಕೆರೆಯ ಮಾಜಿ ಶಾಸಕ ಪಿ ರಮೇಶ್ ಗುರುವಂದನಾ ನುಡಿಗಳನ್ನಾಡುವರು. ಶಿವಸಂಚಾರ ಕಲಾವಿದರು ವಚನಗೀತೆಗಳನ್ನು ಹಾಡುವರು. ಗಾನ ಸಿದ್ಧಗಂಗಾ ಸಂಗೀತ ವಿದ್ಯಾಲಯ ಬೆಂಗಳೂರಿನ ಶ್ರೀಮತಿ ಗೀತಾ ಭತ್ತದ್ ಹಾಗೂ ತಂಡದವರಿAದ ಸಂಗೀತ ಸುಧೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಶ್ರೀ ಶಿವಕುಮಾರ ಕಲಾಸಂಘದ ಹಿರಿಯ ಕಲಾವಿದರಿಂದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ರಚಿಸಿದ, ವೈ ಡಿ ಬದಾಮಿ ನಿರ್ದೇಶನದ `ಮರಣವೇ ಮಹಾನವಮಿ’ ನಾಟಕ ಪ್ರದರ್ಶನಗೊಳ್ಳಲಿದೆ. ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಈ ರಥೋತ್ಸವದಲ್ಲಿ ಪಾಲ್ಗೊಳ್ಳಬೇಕೆಂದು ರಥೋತ್ಸವ ಸಮಿತಿಯವರು ಮನವಿ ಮಾಡಿಕೊಂಡಿದ್ದಾರೆ.