ಸಾಣೇಹಳ್ಳಿಯಲ್ಲಿ  ಮಲ್ಲಿಕಾರ್ಜುನ ಶ್ರೀಗಳ 16ನೆಯ ಶ್ರದ್ಧಾಂಜಲಿ ಸಮಾರಂಭ

ಸಂಜೆವಾಣಿ ವಾರ್ತೆ

ಸಾಣೇಹಳ್ಳಿ; ಫೆ.೧೬; ಕಾಯಕ ಯೋಗಿಗಳು, ಇಷ್ಟಲಿಂಗ ನಿಷ್ಠರು, ಸಮಾಜವನ್ನು ಸನ್ಮಾರ್ಗದಲ್ಲಿ ಕರೆದುಕೊಂಡು ಹೋಗಲಿಕ್ಕೆ ಬೇಕಾದ ಶಕ್ತಿಯನ್ನು ತುಂಬಿದಂಥವರು ಮಲ್ಲಿಕಾರ್ಜುನ ಶ್ರೀಗಳು ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು. ಶ್ರೀ ಶಿವಕುಮಾರ ರಂಗಮಂದಿರದಲ್ಲಿ ನಡೆದ ತರಳಬಾಳು ಜಗದ್ಗುರು ಬೃಹನ್ಮಠದ ಪಟ್ಟಾಧ್ಯಕ್ಷರಾದ ಮಲ್ಲಿಕಾರ್ಜುನ ಶ್ರೀಗಳ 16ನೆಯ ಶ್ರದ್ಧಾಂಜಲಿ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ ನಾವು ಮಲ್ಲಿಕಾರ್ಜುನ ಶ್ರೀಗಳ ಒಡನಾಟದಲ್ಲಿ ಬೆಳದವರು. ಈಗಲೂ ಅನೇಕ ಜನ ಶಿಷ್ಯರು ಹೇಳುವಂಥದ್ದು ಮಲ್ಲಿಕಾರ್ಜುನ ಶ್ರೀಗಳು ನಮಗೆ ಮಾರ್ಗದರ್ಶನ ಮಾಡಿ ಅಡಿಕೆ ತೋಟ ಮಾಡಲಿಕ್ಕೆ ಸಹಾಯ ಮಾಡಿದ್ದರಿಂದ ಆರ್ಥಿಕವಾಗಿ ಸುಸ್ಥಿತಿಯನ್ನು ಪಡೆದುಕೊಂಡಿದ್ದೇವೆAದು. ಶ್ರೀಗಳು ಮಠದಲ್ಲಿದ್ದದ್ದು ತುಂಬಾ ಕಡಿಮೆ. ಯಾವಾಗಲೂ ಊರೂರುಗಳಿಗೆ ಹೋಗಿ ಮಠಕ್ಕೆ ಬೇಕಾದ ದವಸ, ಹಣ ಇತ್ಯಾದಿ ಸಂಗ್ರಹ ಮಾಡುತ್ತಿದ್ದರು. ಅವರ ಕಾಲದಲ್ಲಿ ಶಿಷ್ಯರ ಆರ್ಥಿಕ ಸ್ಥಿತಿ ಇವತ್ತಿನ ಹಾಗೆ ಅಷ್ಟೇನು ಸುಧಾರಣೆ ಆಗಿರಲಿಲ್ಲ. ಯಾವುದೇ ಗ್ರಾಮಗಳಿಗೆ ಹೋದರೂ ಅಲ್ಲಿಯ ಸಮಸ್ಯೆಗಳನ್ನು ಕೇಳಿ ಪರಿಹಾರ ಮಾಡುವ ಗುಣ ಅವರಲ್ಲಿತ್ತು. ಮಲ್ಲಿಕಾರ್ಜುನ ಶ್ರೀಗಳದ್ದು ಪ್ರತಿ ಊರುಗಳಲ್ಲೂ ನ್ಯಾಯಪೀಠ ನಡೆಯುತ್ತಿತ್ತು. ಸಾಕಷ್ಟು ಓದುವ ಪದ್ಧತಿಯನ್ನು ರೂಢಿಸಿಕೊಂಡಿದ್ದರು. ನೀತಿವಂತರಾಗಬೇಕು, ಸತ್ಯವಂತರಾಗಬೇಕು, ಪ್ರಾಮಾಣಿಕರಾಗಬೇಕು, ಚೆನ್ನಾಗಿ ದುಡಿಯಬೇಕು, ಮಠ ನಿಮ್ಮದು ಎಂದು ಭಾವಿಸಿಕೊಳ್ಳಬೇಕು, ಮಠದ ಶಕ್ತಿಯೇ ಭಕ್ತರು ಅಂತ ಹೇಳ್ತಾ ಇದ್ದರು. ಮಲ್ಲಿಕಾರ್ಜುನ ಶ್ರೀಗಳು ಸಾವಿಗೆÀ ಎಂದೂ ಹೆದರಿದಂಥವರಲ್ಲ. ಮರಣವೇ ಮಹಾನವಮಿ ಎಂದು ಹೇಳಿ ಆ ಮರಣವನ್ನು ಅತ್ಯಂತ ಪ್ರೀತಿಯಿಂದ ಸ್ವಾಗತಿಸಿದಂಥವರು. ಅವರಿಗೆ ತುಂಬಾ ಖುಷಿ ಆಗ್ತಾ ಇದ್ದದ್ದು ಹೊಲ, ತೋಟ, ಗದ್ದೆಗಳಲ್ಲಿ ವ್ಯವಸಾಯ ಮಾಡ್ತಾ ಇದ್ದಾಗ. ಸಿರಿಗೆರೆಯಲ್ಲಿರುವ ಅನೇಕ ಗಿಡಮರಗಳು ಮಲ್ಲಿಕಾರ್ಜುನ ಗುರುಗಳು ಇಲ್ಲ ಅಂತ ವ್ಯಥೆಪಡ್ತಾವೇನೋ ಅಂತ ಅನೇಕ ಜನ ಈಗಲೂ ಹೇಳುತ್ತಿರುವುದನ್ನೂ ಕೇಳಿದ್ದೇವೆ.ಮಲ್ಲಿಕಾರ್ಜುನ ಶ್ರೀಗಳ ಜೀವ ಅಪರೂಪದ್ದು. ಸಿರಿಗೆರೆಯಲ್ಲೇ ಹುಟ್ಟಿದರೂ ಮಠದ ಸಂಪರ್ಕ ಹೆಚ್ಚಿತ್ತೇ ಹೊರತು ಮನೆಯ ಸಂಪರ್ಕ ಇರಲಿಲ್ಲ. ಬಸವತತ್ವದ ಬಗ್ಗೆ ಅಪಾರ ಪ್ರೀತಿ, ಪ್ರೇಮ ಹೊಂದಿದ್ದರು. ಬಸವತತ್ವದ ಬಗ್ಗೆ ಸದಾ ಚಿಂತನೆ ಮಾಡ್ತಾ ಇದ್ದರು. ಯಾವುದೇ ಸಭೆ ಸಮಾರಂಭಗಳಲ್ಲಿ ವ್ಯಾವಹಾರಿಕ ಮಾತುಗಳಿಗಿಂತ ತತ್ವ, ಧರ್ಮ, ಆಚಾರಗಳ ಬಗ್ಗೆ ಮಾತನಾಡುತ್ತಿದ್ದರು. ಶ್ರೀಗಳು ಲಿಂಗೈಕ್ಯರಾಗಿ ಇಂದಿಗೆ ಹದಿನಾರು ವರ್ಷಗಳು ಸಂದಿವೆ. ನಾವು ಸಿರಿಗೆರೆಯಲ್ಲಿ ಶಿಕ್ಷಣ ಪಡೆಯುವಾಗ, ಸಾಣೇಹಳ್ಳಿ ಮಠಕ್ಕೆ ಸ್ವಾಮಿಗಳಾದಾಗ ಅವರು ಮಾಡಿದ ಸೇವೆ ಮರೆಯುವಂತಿಲ್ಲ. ಸಾಣೇಹಳ್ಳಿಯಲ್ಲಿ ಇಷ್ಟೆಲ್ಲಾ ತೆಂಗಿನಮರಗಳು ಮೇಲೆ ಎದ್ದಿವೆೆ ಎಂದರೆ ಅದರ ಹಿಂದೆ ಮಲ್ಲಿಕಾರ್ಜುನ ಶ್ರೀಗಳ ಪರಿಶ್ರಮ ತುಂಬಾ ಇದೆ. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಆಶಯದಂತೆ ಎಲ್ಲ ಕೆಲಸ ಕಾರ್ಯಗಳನ್ನು ನೆರವೇರಿಸಿದಂಥವರು. ಅಂತಹ ಪುಣ್ಯಜೀವಿಯನ್ನು ನೆನಪಿಸಿಕೊಳ್ಳುವುದು ಎಂದರೆ ನಾವೂ ಅವರಂತೆ ಕಾಯಕಶೀಲರಾಗಿ, ಶಿವಯೋಗಿಗಳಾಗಿ ಜನಪರವಾದ ಕೆಲಸ ಕಾರ್ಯಗಳನ್ನು ಮಾಡುವುದು. ಅಂಥವರ ನೆನಪು ನಿಮಗೆ ಆಗಬೇಕು ಎನ್ನುವ ಕಾರಣಕ್ಕಾಗಿ ಪ್ರತಿವರ್ಷ ಅವರನ್ನು ನೆನಪು ಮಾಡಿಕೊಳ್ಳುತ್ತೇವೆ ಎಂದರು. ಮಲ್ಲಿಕಾರ್ಜುನ ಶ್ರೀಗಳ ಶ್ರದ್ಧಾಂಜಲಿ ನುಡಿಗಳನ್ನಾಡಿದ ನಿವೃತ್ತ ಪ್ರಾಚಾರ್ಯ ಐ ಜಿ ಚಂದ್ರಶೇಖರಯ್ಯನವರು ಮಾತನಾಡಿ ತರಳಬಾಳು ಗುರುಪರಂಪರೆ ವಿಶ್ವಬಂಧು ಮರುಳಸಿದ್ಧನಿಂದ ಪ್ರಾರಂಭವಾಯಿತು. ತರಳಬಾಳು ಮಠಕ್ಕೆ ಪಟ್ಟಾಧ್ಯಕ್ಷರು, ವಿರಕ್ತರು, ಚರಪಟ್ಟಾಧ್ಯಕ್ಷರು ಎನ್ನುವ ಮೂರು ವಿಧದ ಸ್ವಾಮಿಗಳಿದ್ದರು. ತರಳಬಾಳು ಜಗದ್ಗುರು ಬೃಹನ್ಮಠದ ಚರಪಟ್ಟಾಧ್ಯಕ್ಷರಾದ್ದವರು ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು. ಸಿರಿಗೆರೆಯಲ್ಲಿ ಜನಿಸಿ ಸಿರಿಗೆರೆ, ಬೀರೂರು, ಕಾಶಿಯಲ್ಲಿ ವಿದ್ಯಾಭ್ಯಾಸ ಮಾಡಿದರು. ಅರಿವು ಆಚಾರ ಹೊಂದಿದವ ಗುರು. ಕ್ರಿಯೆಯಂತೆ ಆಚರಣೆಯಲ್ಲಿ ತರುವವನೇ ಆಚಾರ್ಯ. ಅಂತಹ ಅರಿವು ಆಚಾರ ಹೊಂದಿದವರು ಮಲ್ಲಿಕಾರ್ಜುನ ಶ್ರೀಗಳು. ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರ ಕೀರ್ತಿಗೆ ಭಂಗ ತಾರದೇ ತನು, ಮನ, ಧನ, ಪ್ರಾಣವನ್ನು ಒತ್ತಿ ಇಟ್ಟು ಶಿವಕುಮಾರ ಶ್ರೀಗಳನ್ನು ರಕ್ಷಿಸಿದರು. ಚಕ್ಕಡಿಗಾಡಿನಲ್ಲಿ ಪ್ರವಾಸ ಮಾಡಿ ನಾಡಿನ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ ಊರೂರುಗಳಿಗೆ ಹೋಗಿ ಕಾಣಿಕೆ ಸಂಗ್ರಹ ಮಾಡುತ್ತಿದ್ದರು. ಅವರನ್ನು ಶಿವಯೋಗಿಗಳೆಂದು ಕರೆಯುವರು. ಮಲ್ಲಿಕಾರ್ಜುನ ಶ್ರೀಗಳು ನಿಜವಾದ ಲಿಂಗವAತ ಆಚಾರ್ಯರು. ಆಧ್ಯಾತ್ಮಿಕ ಶಕ್ತಿ ಹೊಂದಿದವರು. ಅವರ ಆಶೀರ್ವಚನದ ವಸ್ತು ಬಸವಾದಿ ಶಿವಶರಣರ ವಚನಗಳು. ಶಿವಯೋಗಿಗಳಂತೆ ಕಾಯಕಯೋÃಗಿಗಳೂ ಆಗಿದ್ದರು. ನೂರಾರು ಎಕರೆ ತೆಂಗಿನತೋಟವನ್ನು ಮಾಡಿದರು. ಪೂಜ್ಯರು ಬೆಳಗಿನಿಂದ ಸಂಜೆಯವರೆಗೂ ತೋಟದಲ್ಲಿ ದುಡಿಯುತ್ತಿದ್ದರು. ಮಠದ ಶಿಷ್ಯರನ್ನು ಸಮಾಜದ ಆಸ್ತಿಯನ್ನಾಗಿ ಮಾಡಿದರು. ಶಿಷ್ಯರ ಮನೆಯ ಕತ್ತಲೆಯನ್ನು ಕಳೆದವರು. ಸಾಣೇಹಳ್ಳಿಯಲ್ಲಿ 200 ತೆಂಗಿನಗಿಡಗಳನ್ನು ನೆಟ್ಟು ಬೆಳೆಸಿದರು. ತರಳರ ಬಾಳನ್ನು ಹಸನಗೊಳಿಸಬೇಕೆಂಬ ಹಂಬಲ ಬಲವಾಗಿತ್ತು. 60 ವರ್ಷಗಳ ಕಾಲ ಸಂನ್ಯಾಸಿ ಜೀವನವನ್ನು ಸಮಾಜಕ್ಕಾಗಿ ಸಮರ್ಪಣ ಭಾವದಿಂದ ಸವೆಸಿದರು ಎಂದರು.ವೇದಿಕೆಯ ಮೇಲೆ ಮುಖ್ಯಶಿಕ್ಷಕ ಬಸವರಾಜ್, ಹೊನ್ನೇಶಪ್ಪ, ಶಿವಕುಮಾರ್, ಶಿಲ್ಪ ಇದ್ದರು. ಆರಂಭದಲ್ಲಿ ಶಿವಸಂಚಾರದ ಕಲಾವಿದ ನಾಗರಾಜ್ ಹೆಚ್ ಎಸ್ ಹಾಗೂ ತಬಲಸಾಥಿ ಶರಣ ವಚನಗೀತೆಗಳನ್ನು ಹಾಡಿದರು. ಅಧ್ಯಾಪಕ ಬಸನಗೌಡ ಪೋಲೀಸ ಪಾಟೀಲ್ ಸ್ವಾಗತಿಸಿದರು. ಮಲ್ಲಿಕಾರ್ಜುನ್ ನಿರೂಪಿಸಿ ವಂದಿಸಿದರು. ಉಭಯ ಶಾಲೆಗಳ ಅಧ್ಯಾಪಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.