ಸಾಣೇಹಳ್ಳಿಯಲ್ಲಿ ನಾಟಕೋತ್ಸವದ ಸಂಭ್ರಮ

ಸಾಣೇಹಳ್ಳಿ, ನ. 4; ವ್ಯಕ್ತಿಯ ದೈಹಿಕ ಆರೋಗ್ಯಕ್ಕಿಂತ ಬೌದ್ಧಿಕ, ಮಾನಸಿಕ, ನೈತಿಕ ಆರೋಗ್ಯ ಕೆಡದ ಹಾಗೆ ಎಚ್ಚರವಹಿಸಬೇಕಾಗಿದೆ ಎಂದು ಇಲ್ಲಿನ ಶ್ರೀ ಶಿವಕುಮಾರ ಕಲಾಸಂಘ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ನಾಟಕೋತ್ಸವದ ನೇತೃತ್ವ ವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಮಾತನಾಡಿ ದೀಪಾವಳಿಯನ್ನು ಬೆಳಕಿನ ಹಬ್ಬ ಎನ್ನುವರು. ದೀಪ ತಾನು ಉರಿದು ಸುತ್ತಲ ಕತ್ತಲೆ ಕಳೆಯುವುದು. ಹಾಗೆ ಮನುಷ್ಯ ತಾನು ನೊಂದುಕೊಂಡಾದರೂ ಇತರರಿಗೆ ನಲಿವನ್ನು ನೀಡಬೇಕು. ಮೇಣದಬತ್ತಿ ತಾನು ಕರಗಿ ಬೆಳಕು ಕೊಡುವಂತೆ ಮಾನವ ಸತ್ಕಾರ್ಯಗಳ ಮೂಲಕ ದೀಪದಂತೆ ಸಮಾಜಕ್ಕೆ ಬೆಳಕು ಕೊಡಬೇಕು. ದೇಹ ದೇವಾಲಯವಾಗುವುದು ಪಂಚೇಂದ್ರಿಯಗಳ ಸದ್ಭಳಕೆಯಿಂದ. ಅವುಗಳಿಗೆ ಬೇಕಾದ ಆಹಾರ ಎಂದರೆ ಸಂಸ್ಕಾರ. ಅದನ್ನು ಅಕ್ಕಮಹಾದೇವಿಯವರ ಮಾತುಗಳಲ್ಲೇ ಕೇಳಬೇಕು; ಕಣ್ಗೆ ಶೃಂಗಾರ ಗುರುಹಿರಿಯರ ನೋಡುವುದು. ಕರ್ಣಕ್ಕೆ ಶೃಂಗಾರ ಪುರಾತನರ ಸಂಗೀತಗಳ ಕೇಳುವುದು. ವಚನಕ್ಕೆ ಶೃಂಗಾರ ಸತ್ಯವ ನುಡಿವುದು. ಸಂಭಾಷಣೆಗೆ ಶೃಂಗಾರ ಸದ್ಭಕ್ತರ ನುಡಿಗಡಣ. ಕರಕ್ಕೆ ಶೃಂಗಾರ ಸತ್ಪಾತ್ರಕ್ಕೀವುದು. ಜೀವಿಸುವ ಜೀವನಕ್ಕೆ ಶೃಂಗಾರ ಗಣಮೇಳಾಪ. ಇವಿಲ್ಲದ ಜೀವಿಯ ಬಾಳುವೆ ಏತಕ್ಕೆ ಬಾತೆಯಯ್ಯಾ ಚೆನ್ನಮಲ್ಲಿಕಾರ್ಜುನಾ? ದೈಹಿಕ ಆರೋಗ್ಯ ಸುಸ್ಥಿತಿಯಲ್ಲಿರಬೇಕೆಂದರೆ ಮನುಷ್ಯನ ಆಚಾರ, ವಿಚಾರಗಳು ಪರಿಶುದ್ಧವಾಗಿರಬೇಕು. ಪುಷ್ಠಿದಾಯಕವಾದ ಅಲ್ಪ ಆಹಾರವನ್ನು ಸೇವಿಸಬೇಕು. ನಾವು ಬದುಕಿರುವುದೇ ಉಣ್ಣಲಿಕ್ಕಾಗಿ ಎನ್ನುವ ವರ್ಗವೂ ನಮ್ಮಲ್ಲಿದೆ. ಬದುಕಲು ಎಷ್ಟು ಬೇಕೋ ಅಷ್ಟನ್ನು ಉಣ್ಣಬೇಕು ಎನ್ನುವ ವರ್ಗವೂ ಇದೆ. ಮನುಷ್ಯ ಬದುಕಲು, ಸಾರ್ಥಕ ಕಾರ್ಯಗಳನ್ನು ಮಾಡಲು ಊಟ ಮಾಡಬೇಕು. ಆಗ ಆರೋಗ್ಯ ಎಂದೂ ಹದಗೆಡಲು, ರೊಗರುಜಿನುಗಳ ಗೂಡಾಗಲು ಸಾಧ್ಯವಿಲ್ಲ. ಈ ಸತ್ಯವನ್ನು ಮನಗಾಣಿಸಿದವರು ಬಸವಾದಿ ಶಿವಶರಣರು. ಅವರು ಆಹಾರ ಎನ್ನದೆ ಪ್ರಸಾದ ಎನ್ನುವರು. ನಾವು ಉಣ್ಣುವ ಅನ್ನ ಪ್ರಸಾದವಾದರೆ, ಕುಡಿಯುವ ನೀರು ತೀರ್ಥವಾದರೆ ಬದುಕು ಕಳೆಗಟ್ಟುವುದು. ನಾಡಿನಲ್ಲಿ ಆಹಾರ, ನೀರಿನ ಅಭಾವ ಕೂಡ ಇಲ್ಲವಾಗುವುದು. ದೀಪಾವಳಿಯ ಸಂದರ್ಭದಲ್ಲಿ ಹೊಟ್ಟೆಗೆ ತುಂಬುವ ಆಹಾರಕ್ಕಿಂತ ತಲೆಗೆ ತುಂಬುವ ಅರಿವಿನ ಆಹಾರದತ್ತ ಹೆಚ್ಚು ಗಮನ ಹರಿಸಬೇಕು. ಆಗಲೇ ಹಬ್ಬದ ಆಚರಣೆ ಅರ್ಥಪೂರ್ಣ. ಅಂಥ ಆಹಾರವನ್ನು ಬೆಳ್ಳಿಹಬ್ಬದ ನಾಟಕೋತ್ಸವ ನೀಡುತ್ತಿದ್ದು ಅದನ್ನು ಉಂಡು ಅರಗಿಸಿಕೊಳ್ಳುವತ್ತ ಕಲಾಪ್ರೇಮಿಗಳು ಅಡಿಯಿಡಬೇಕು ಎಂದರು. ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಅಥಣಿ ಶ್ರೀ ಮೋಟಗಿಮಠದ ಶ್ರೀ ಪ್ರಭುಚನ್ನಬಸವ ಸ್ವಾಮಿಗಳು ಮಾತನಾಡಿ ದೀಪಾವಳಿಯ ತುಂಬು ಹಬ್ಬದಲ್ಲಿಯೂ ಇಷ್ಟು ಜನರು ಸೇರಿರುವುದು ಅಚ್ಚರಿಯನ್ನುಂಟು ಮಾಡುತ್ತದೆ. ಇಂದು ಎಲ್ಲ ದಾರಿಗಳು ಎಲ್ಲಿಗೆ ಅಂದರೆ ಸಾಣೇಹಳ್ಳಿಗೆ ಎನ್ನುವಂತೆ ಸಾಣೇಹಳ್ಳಿಯ ಕಾರ್ಯಕ್ಷೇತ್ರ ವಿಸ್ತರಿಸಿದೆ. 45 ವರ್ಷಗಳ ಹಿಂದೆ ಬಂದ ಮಹಾಯೋಗಿಯೊಬ್ಬರ ಆಗಮನ ಸಾಣೇಹಳ್ಳಿಯನ್ನು ಈ ಮಟ್ಟಕ್ಕೆ ಬೆಳೆಸಿದೆ. ಆ ಮಹಾಯೋಗಿಯೇ ಪಂಡಿತಾರಾಧ್ಯ ಶ್ರೀಗಳು. ರಾಷ್ಟಾçದ್ಯಂತವಷ್ಟೇ ಅಲ್ಲ; ಜಗತ್ತಿನಾದ್ಯಂತ ಸಾಣೇಹಳ್ಳಿಯ ಕೀರ್ತಿ ಹಬ್ಬಿದೆ. ನಿಜವಾದ ದೀಪಾವಳಿಯನ್ನು ನಾವಿಲ್ಲಿ ಆಚರಿಸುತ್ತಿದ್ದೇವೆ. ಒಲವಿನ ಪನ್ನಿರನ್ನು ಎರೆಯುವ ಸಂಭ್ರಮದ ಸಮಾರಂಭವಿದು. ಇಲ್ಲಿ ಮಠದ ಹೆಗ್ಗಳಿಕೆಯನ್ನು ಹೊಗಳಲು ಅವಕಾಶವಿಲ್ಲ; ಇಲ್ಲಿರುವುದು ತತ್ವಗಳ ವಿಜೃಂಭಣೆ. ಪಂಡಿತಾರಾಧ್ಯ ಶ್ರೀಗಳದ್ದು ಪುಸ್ತಕದ ಸಾಹಿತ್ಯವಲ್ಲ; ಶಿವಸಂಚಾರದ ಸೋಪಾನ. ನನ್ನಂಥ ಅನೇಕ ಸ್ವಾಮಿಗಳಿಗೆ ಪಂಡಿತಾರಾಧ್ಯ ಶ್ರೀಗಳು ಮಾದರಿ. ಈ ವೇದಿಕೆ ಕಲಾಸಂಸ್ಕೃತಿಯನ್ನು ಎಲ್ಲೆಡೆ ಪಸರಿಸುವ ಮಹಾಬೆಳಕನ್ನು ಕರುಣಿಸಿದೆ ಎಂದರು.