ಸಾಗುವಳಿದಾರರಿಗೆ ಹಕ್ಕುಪತ್ರಕ್ಕಾಗಿ ಆಗ್ರಹಿಸಿ
ಸೆ.7 ಕ್ಕೆ ನಗರದಲ್ಲಿ ಪ್ರತಿಭಟನೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಸೆ.3- ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಲು ಮತ್ತು ತ್ವರಿತವಾಗಿ ಭೂ ಮಂಜೂರಾತಿ ಸಮಿತಿ ರಚಿಸಲು ಆಗ್ರಹಿಸಿ ಸೆ.7 ರಂದು ನಗರದಲ್ಲಿ ಪ್ರತಿಭಟನೆಯನ್ನು ನಡೆಸಲಿದೆಂದು ಅಖಿಲ ಭಾರತ ರೈತ ಕೃಷಿ ಕಾಮಿರ್ಕರ ಸಂಘಟನೆ ಹೇಳಿದೆ.
ನಗರದ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿ ನೀಡಿದ ರಾಜ್ಯ ಸಮಿತಿ ಸದಸ್ಯ ಈ.ಹನುಮಂತಪ್ಪ,   ರಾಜ್ಯದಲ್ಲಿ  ಭೂಹೀನ ಮತ್ತು ಬಡ ರೈತ ಕೃಷಿಕಾರ್ಮಿಕರು ಯಾವುದೇ ಕೆಲಸವಿಲ್ಲದೆ ಬದುಕಲು ಬೇರೆ ದಾರಿಕಾಣದೆ ತಮ್ಮ ಜೀವನ ನಿರ್ವಹಣೆಗೆ ಅನಿವಾರ್ಯವಾಗಿ ಸುಮಾರು 70-80 ವರ್ಷಗಳಿಂದ ಕಂದಾಯ ಹಾಗೂ ಅರಣ್ಯದಂಚಿನ ಕುರುಚಲು ಗಿಡ, ಕಲ್ಲು, ಬೀಳು ಭೂಮಿ ಇರುವ ಪ್ರದೇಶವನ್ನು ಹಸನುಗೊಳಿಸಿಕೊಂಡು ಸಾಗುವಳಿ ಮಾಡುತ್ತಿದ್ದಾರೆ. ಬಹುಪಾಲು ರೈತರಿಗೆ ಇದರಿಂದ ಬರುವ ಅಲ್ಪ ಸ್ವಲ್ಪ ವರಮಾನವೇ ಜೀವನಾದಾರವಾಗಿದೆ. ಇಲ್ಲಿಯವರೆಗೆ ಆಳ್ವಿಕೆ ಮಾಡಿದ ಎಲ್ಲ ಸರಕಾರಗಳಿಗೂ ಈ ಬಡ ರೈತರ ಜೀವನದ ವಸ್ತು ಸ್ಥಿತಿಯ ಅರಿವಿದ್ದೇ ಸರ್ಕಾರಕ್ಕೆ ಸೇರಿದ ಜಮೀನಿನಲ್ಲಿ ಉಳುಮೆಗೆ ಅವಕಾಶ ಕೊಡುತ್ತಾ ಬಂದಿದ್ದಾರೆ. ಆದರೆ ಸಾಗುವಳಿದಾರರಿಗೆ ಹಕ್ಕುಪತ್ರವನ್ನು ನೀಡಲು ಯಾವುದೇ ಸರ್ಕಾರ ಅವಶ್ಯಕ ಕ್ರಮಕೈಗೊಂಡಿಲ್ಲ.
ಶಾಸನ್ನಬದ್ದವಾಗಿ ಭೂಮಿಯ ಹಕ್ಕು ದೊರೆಯದೆ ಇರುವುದರಿಂದ ಬಗರ್ ಹುಕುಂ ಸಾಗುವಳಿದಾರರು ಸಮಾಜದಲ್ಲಿನ ಇತರೆ ಜನರಂತೆ ನಿಶ್ಚಿತ ಬದುಕು ರೂಪಿಸಿಕೊಳ್ಳಲಾಗದೆ ದಶಕಗಳಿಂದ ತೀವ್ರ ಮಾನಸಿಕ ತೋಳಲಾಟದಲ್ಲಿದ್ದು ಜರ್ಜರಿತರಾಗಿದ್ದಾರೆ. ಅಲ್ಲದೆ ಅವರ ಕುಟುಂಬ ಹಾಗೂ ಮಕ್ಕಳ ಭವಿಷ್ಯವು ತೀವ್ರ ಅಭದ್ರತೆಯಿಂದ ಕೂಡಿದೆ. ಬಹುತೇಕ ಸಾಗುವಳಿದಾರರು ಅನಕ್ಷರಸ್ತರಾಗಿದ್ದು ಕೃಷಿಯ ಮೇಲೆಯೇ ಸಂಪೂರ್ಣವಾಗಿ ಅವಲಂಬಿತರಾಗಿದ್ದಾರೆ. ಸಹಜವಾಗಿ ಇವರಿಗೆ ಹಕ್ಕುಪತ್ರ ಇಲ್ಲದ ಕಾರಣ ಸರ್ಕಾರದ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಕೃಷಿ ಬೆಳೆ ಸಾಲ, ಕೃಷಿ ಪರಿಕರಗಳ ಮೇಲಿನ ಸಾಲ, ಹಾಗೂ ಇನ್ನಿತರ ಜೀವನೋಪಾಯಕ್ಕಾಗಿ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಯಾವುದೇ ರೀತಿಯ ಸಾಲವು ದೊರೆಯುತ್ತಿಲ್ಲ. ಆದ ಕಾರಣ ಬಹುತೇಕ ಬಡ ರೈತ ಕೃಷಿಕಾರ್ಮಿಕರು ಬೇರೆದಾರಿಯಿಲ್ಲದೆ ಕೈ ಸಾಲಕ್ಕೆ ಮೊರೆ ಹೋಗಿ ತೀವ್ರ ಸಂಕಟಕ್ಕೆ ಸಿಲುಕಿದ್ದಾರೆ.
ಸಾಗುವಳಿ ಮಾಡುತ್ತಿರುವ ಜಮೀನಿನಲ್ಲಿ ರೈತರಿಗೆ ಸೂಕ್ತ ರಕ್ಷಣೆ ಸಹಾ ಸಿಗುತ್ತಿಲ್ಲ. ಸರ್ಕಾರಿ ಅಧಿಕಾರಿಗಳಿಂದ ಪದೇ ಪದೇ ಕಿರುಕುಳಗಳನ್ನು ಅನುಭವಿಸುತ್ತಿದ್ದಾರೆ.
ಅದಕ್ಕಾಗಿ  ಹಕ್ಕುಪತ್ರ ನೀಡುವವರೆಗೆ ಅಂತಹ ರೈತರ ಜಮೀನುಗಳಿಗೆ ಸರ್ಕಾರ ಸೂಕ್ತ ರಕ್ಷಣೆಕೊಡಬೇಕು. ಬಗರ್ ಹುಕುಂ ಸಾಗುವಳಿದಾರರ ಮೇಲೆ ಅಧಿಕಾರಿಗಳು ನಡೆಸುತ್ತಿರುವ ಕಿರುಕುಳಗಳನ್ನು  ನಿಲ್ಲಿಸಬೇಕು ಎಂದರು.
 ಸಂಘಟನೆಯ ಜಿಲ್ಲಾ ಅಧ್ಯಕ್ಷ ಗೋವಿಂದ್ ಇದುವರೆಗೂ ಆಳ್ವಿಕೆ ನಡೆಸಿದ ಎಲ್ಲ ಸರ್ಕಾರಗಳು ಶ್ರೀಮಂತ ಉದ್ಯಮಿಗಳ ರೆಸಾರ್ಟ್, ಹೋಮಸ್ಟೇ, ಹೇರಿಟೇಜ ಹೊಮ್ಸ್, ಪ್ಲಾಂಟೇಷನ್‌ಗಾರ್ಡನ್, ಮುಂತಾದವುಗಳನ್ನು ಮಾಡಿಕೊಳ್ಳಲು ತನ್ಮೂಲಕ ಸಾವಿರಾರು ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲು ಪರವಾನಿಗೆ ನೀಡಿವೆ. ಜೊತೆಗೆ ಸರಕಾರ ತಮಗೆ ಬೇಕಾದ ಸಂಘ ಸಂಸ್ಥೆಗಳಿಗೆ ಭೂಮಿಯನ್ನು ಹಂಚಿಕೆ ಮಾಡುತ್ತಿದ್ದಾರೆ. ಹಲವಾರು ವರ್ಷಗಳಿಂದ ಸಣ್ಣಪುಟ್ಟ ಹಿಡುವಳಿಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿರುವ ಬಗರ್‌ಹುಕುಂ ಸಾಗುವಳಿದಾರರ ಸಂಕಷ್ಟ ಮಾತ್ರ ಈ ಸರ್ಕಾರಗಳಿಗೆ ಅರ್ಥವಾಗುತ್ತಿಲ್ಲ.
ಆದ್ದರಿಂದ ತಾಲ್ಲೂಕಿನ ಎಲ್ಲಾ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ಕೊಡಬೇಕೆಂದು ಒತ್ತಾಯಿಸಿ ಸರ 7 ರಂದು ನಗರದ ಗಾಂಧೀ ಭವನದಿಂದ ಡಿ.ಸಿ ಕಛೇರಿಯವರೆಗೆ ಬೃಹತ್    ಹೋರಾಟವನ್ನು ಹಮ್ಮಿಕೊಳ್ಳಲಾಗಿದೆಂದು ಹೇಳಿದರು.
 ಸಂಘಟನೆಯಬ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ,  ಸಾಗುವಳಿದಾರರ ಹೋರಾಟ ಸಮಿತಿ ಸದಸ್ಯ, ಮಾರೆಪ್ಪ  ಇತರರಿದ್ದರು

Attachments area