ಸಾಗರ, ಶಿಕಾರಿಪುರ, ಸೊರಬ, ಹೊಸನಗರದಲ್ಲಿ ಶಾಂತಿಯುತ ಮತದಾನ

ಶಿವಮೊಗ್ಗ, ಡಿ. 27: ಎರಡನೇ ಹಂತದ ಗ್ರಾಮ ಪಂಚಾಯತಿ ಚುನಾವಣೆ ನಡೆಯುತ್ತಿರುವ ಜಿಲ್ಲೆಯ ಸಾಗರ, ಶಿಕಾರಿಪುರ, ಸೊರಬ ಮತ್ತು ಹೊಸನಗರ ತಾಲೂಕುಗಳಲ್ಲಿ ಮತದಾನ ಪ್ರಕ್ರಿಯೆ ಸಂಪೂರ್ಣ ಶಾಂತಿಯುತವಾಗಿತ್ತು.ಚಳಿಯ ಕಾರಣದಿಂದ ಬೆಳಿಗ್ಗೆ ಮತದಾನ ಪ್ರಕ್ರಿಯೆ ನೀರಸವಾಗಿತ್ತು. ಬಿಸಿಲೇರುತ್ತಿದ್ದಂತೆ ಮತಗಟ್ಟೆಗೆ ಆಗಮಿಸುವ ಮತದಾರರ ಸಂಖ್ಯೆಯು ಹೆಚ್ಚಾಯಿತು. ಬಹುತೇಕ ಮತಗಟ್ಟೆಗಳ ಮುಂಭಾಗ ಮತದಾರರ ಸಾಲು ಕಂಡುಬಂದಿತು.ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಸಲು ಜಿಲ್ಲಾಡಳಿತ ಎಲ್ಲ ಅಗತ್ಯ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಬೆಳಿಗ್ಗೆ 7 ಗಂಟೆಯಿಂದ ಆರಂಭವಾದ ಮತದಾನ ಸಂಜೆ 5 ರವರೆಗೆ ನಡೆಯಲಿದೆ. ಚುನಾವಣಾ ಆಯೋಗ ನಿಗದಿಪಡಿಸಿರುವ ಭಾವಚಿತ್ರವಿರುವ ಯಾವುದೇ ಗುರುತಿನ ಚೀಟಿಯನ್ನು ತೋರಿಸಿ ಮತ ಚಲಾಯಿಸಲು ಮತದಾರರಿಗೆ ಅವಕಾಶ ಕಲ್ಪಿಸಲಾಗಿತ್ತು.ಮೊದಲ ಹಂತದಲ್ಲಿ ಜಿಲ್ಲೆಯ ಶಿವಮೊಗ್ಗ, ಭದ್ರಾವತಿ ಮತ್ತು ತೀರ್ಥಹಳ್ಳಿ ತಾಲೂಕುಗಳಲ್ಲಿ ಚುನಾವಣೆ ನಡೆದಿತ್ತು.ಮತ ಎಣಿಕೆ: ಮತ ಎಣಿಕೆ ಕಾರ್ಯ ಡಿಸೆಂಬರ್ 30ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ. ಶ್ರೀ.ಹೆಚ್.ಎಸ್.ರುದ್ರಪ್ಪ ರಾಷ್ಟ್ರೀಯ ಪದವಿ ಪೂರ್ವ ಕಾಲೇಜು ಶಿವಮೊಗ್ಗ, ಸಂಚಿ ಹೊನ್ನಮ್ಮ ಬಾಲಕಿಯರ ಕಾಲೇಜು ಭದ್ರಾವತಿ, ಡಾ.ಯು.ಆರ್.ಅನಂತಮೂರ್ತಿ ಸರ್ಕಾರಿ ಪ್ರೌಢಶಾಲೆ ತೀರ್ಥಹಳ್ಳಿ, ಸರ್ಕಾರಿ ಪದವಿ ಪೂರ್ವ ಕಾಲೇಜು, ಬಿ.ಎಚ್.ರಸ್ತೆ ಸಾಗರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಿಕಾರಿಪುರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೊರಬ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ಹೊಸನಗರದಲ್ಲಿ ಮತ ಎಣಿಕೆ ನಡೆಯಲಿದೆ.