ಸಾಗರದಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಪಲ್ಟಿ : 30 ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ!

ಸಂಜೆವಾಣಿ ವಾರ್ತೆ

ಶಿವಮೊಗ್ಗ, ಜೂ. 9: ಚಾಲಕನ ನಿಯಂತ್ರಣ ಕಳೆದುಕೊಂಡ ಖಾಸಗಿ ಬಸ್ ವೊಂದು ಪಲ್ಟಿಯಾಗಿ ಬಿದ್ದ ಪರಿಣಾಮ, ಸುಮಾರು 30 ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಮುಂಬಾಳು ಕ್ರಾಸ್ ಬಳಿ ಭಾನುವಾರ ನಡೆದಿದೆ.ಜೆಆರ್’ಬಿ ಹೆಸರಿನ ಖಾಸಗಿ ಬಸ್ ಪಲ್ಟಿಯಾಗಿದ್ದು ಎಂದು ಗುರುತಿಸಲಾಗಿದೆ. ಸದರಿ ಬಸ್ ಸಾಗರದಿಂದ ಧರ್ಮಸ್ಥಳಕ್ಕೆ ತೆರಳುತ್ತಿತ್ತು. ಗಾಯಾಳು ಪ್ರಯಾಣಿಕರನ್ನು ಆನಂದಪುರ ಹಾಗೂ ಸಾಗರದ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.ಮಳೆ ಬರುತ್ತಿದ್ದ ವೇಳೆ ಚಾಲಕ ದಿಢೀರ್ ಬ್ರೇಕ್ ಹಾಕಿದ್ದರಿಂದ, ಬಸ್ ಪಲ್ಟಿಯಾಗಿ ಬೀಳಲು ಕಾರಣವಾಗಿದೆ ಎನ್ನಲಾಗಿದ್ದು, ಚಾಲಕನ ಅಜಾಗರೂಕ ಚಾಲನೆಯಿಂದ ಅವಘಡ ಸಂಭವಿಸಿದೆ. ಘಟನಾ ಸ್ಥಳಕ್ಕೆ ಇನ್ಸ್’ಪೆಕ್ಟರ್ ನಾಗರಾಜ್ ಅವರು ಭೇಟಿಯಿತ್ತು ಪರಿಶೀಲನೆ ನಡೆಸಿದರು. ಈ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.