ಸಾಗನೂರ: ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಆಚರಣೆ

ಕಲಬುರಗಿ,ಫೆ.8: ಜಿಲ್ಲೆಯ ಅಫಜಲಪುರ ತಾಲೂಕಿನ ಸಾಗನೂರ ಗ್ರಾಮದಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮದ ಅಡಿಯಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಸ್ತ್ರೀಶಕ್ತಿ ಒಕ್ಕೂಟದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಮುರುಗೇಶ ಗುಣಾರಿ ಚಾಲನೆ ನೀಡಿದರು.
ನಂತರ ಶಾಲೆಯ ಸಹ ಶಿಕ್ಷಕ ರವಿಚಂದ್ರ ಅತನೂರ ಮಾತನಾಡಿ, ಮಕ್ಕಳು ಬಾಲ್ಯದಿಂದಲೇ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ಇದರಿಂದ ಅವರು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.ಸಾಗನೂರ ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕ ಶರಣಬಸಪ್ಪ ನಾಟಿಕಾರ್ ಮಾತನಾಡಿ, ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವುದರಿಂದ ಇಡೀ ಕುಟುಂಬಕ್ಕೆ ಆಧಾರವಾಗುತ್ತಾರೆ. ಮೇಲಾಗಿ, ಸ್ವಾವಲಂಬಿ ಬದುಕು ಸಾಗಿಸಲು ಶಿಕ್ಷಣ ಹಾದಿ ರೂಪಿಸುತ್ತದೆ ಎಂದರು.ಅಫಜಲಪುರ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರೇಮಾನಂದ ಚಿಂಚೋಳಿಕರ್, ಜಿಲ್ಲಾ ಸಂಯೋಜಕಿ ವಿಜಯಲಕ್ಷ್ಮಿ, ಗ್ರಾಮ ಪಂಚಾಯತಿ ಸದಸ್ಯ ಈರಣ್ಣ ಸುತಾರ್, ಹಿರಿಯ ಮೇಲ್ವಿಚಾರಕಿ ಮೀನಾಕ್ಷಿ ಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಳೆ, ಶಾಲೆಯ ಮುಖ್ಯಗುರು ಮೋನಪ್ಪ, ಪ್ರೌಢಶಾಲೆಯ ಸಹ ಶಿಕ್ಷಕರಾದ ಸೋಮಯ್ಯ, ಅನ್ನಪೂರ್ಣ, ಅಂಗನವಾಡಿ ಕಾರ್ಯಕರ್ತೆ ಶಿವಲೀಲಾ, ಸ್ತ್ರೀ ಶಕ್ತಿ ಒಕ್ಕೂಟದ ಸದಸ್ಯರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.ಅಂಗನವಾಡಿ ಕಾರ್ಯಕರ್ತೆ ಶಾಂತಾ ಸರಡಗಿ ಸ್ವಾಗತಿಸಿದರು. ಮೇಲ್ವಿಚಾರಕಿ ಮೀನಾಕ್ಷಿ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೇಲ್ವಿಚಾರಕಿ ಶಾರದಾ ಅವಟೆ ನಿರೂಪಿಸಿದರು.ಇದಕ್ಕೂ ಮುನ್ನ ಗ್ರಾಮದಲ್ಲಿ ಹೆಣ್ಣು ಮಗುವನ್ನು ರಕ್ಷಿಸಿ, ಹೆಣ್ಣು ಮಗುವಿಗೆ ಶಿಕ್ಷಣ ನೀಡಿ ಎಂಬ ಘೋಷ ವಾಕ್ಯದೊಂದಿಗೆ ಸಾಗನೂರ ಗ್ರಾಮದ ಮುಖ್ಯರಸ್ತೆ ಹಾಗೂ ಬೀದಿ ರಸ್ತೆಗಳಲ್ಲಿ ವಿದ್ಯಾರ್ಥಿಗಳು ಜಾಥಾ ನಡೆಸಿದರು. ಶಾಲೆಯ ಮುಖ್ಯಗುರು, ಸಹ ಶಿಕ್ಷಕರು ಹಾಗೂ ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಜಾಥಾದಲ್ಲಿ ಪಾಲ್ಗೊಂಡಿದ್ದರು.