ಸಾಕ್ಸ್‌ನಲ್ಲಿ ಅರ್ಧ ಕೆ.ಜಿ ಅಕ್ರಮ ಚಿನ್ನ ಸಾಗಾಟ: ಆರೋಪಿ ಸೆರೆ


ಮಂಗಳೂರು, ಎ.೧೯- ದುಬೈಯಿಂದ ಆಗಮಿಸಿದ ವಿಮಾನದಲ್ಲಿ ಬಂದಿಳಿದ ಪ್ರಯಾಣಿಕನೋರ್ವ ಸಾಕ್ಸ್ (ಕಾಲುಚೀಲ)ನಲ್ಲಿ ಅಡಗಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿರುವುದನ್ನು ಕಸ್ಟಮ್ಸ್ ಅಧಿಕಾರಿಗಳು ನಿನ್ನೆ ಬೆಳಗ್ಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ತೆ ಹಚ್ಚಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಕಾಸರಗೋಡು ಮೂಲದ ಅಬೂಬಕರ್ ಸಿದ್ದೀಕ್ ಪುಲಿಕೂರ್ ಮುಹಮ್ಮದ್ ಎಂಬ ಪ್ರಯಾಣಿಕ ಈ ಚಿನ್ನ ಅಕ್ರಮ ಸಾಗಾಟದ ಆರೋಪಿಯಾಗಿದ್ದಾನೆ. ಈತ ದುಬೈಯಿಂದ ಏರ್ ಇಂಡಿಯಾ ವಿಮಾನದಲ್ಲಿ ಮಂಗಳೂರಿಗೆ ಆಗಮಿಸಿದ್ದಾನೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪಾಸಣೆಯ ವೇಳೆ ಈತ ಸಾಕ್ಸ್ ನೊಳಗೆ ಅರ್ಧ ಕೆ.ಜಿ. ಚಿನ್ನವನ್ನು ಬಚ್ಚಿಟ್ಟಿರುವುದು ಪತ್ತೆಯಾಗಿದೆ. ಅವುಗಳ ಮೌಲ್ಯ ೨೩.೪೪ ಲಕ್ಷ ರೂ. ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಸ್ಟಮ್ಸ್ ಉಪ ಆಯುಕ್ತ ಡಾ.ಕಪಿಲ್, ಅಧಿಕಾರಿಗಳಾದ ಭೂಮ್ಕರ್, ವಿಕಾಸ್ ಮತ್ತು ಕ್ಷಿತಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.