ಸಾಕ್ಷಿದಾರರನ್ನು ಹೆದರಿಸಿದವನಿಗೆ ಜೈಲುಶಿಕ್ಷೆ

ಕಲಬುರಗಿ ಮಾ 26: ಸಾಕ್ಷಿದಾರರನ್ನು ಬೆದರಿಸಿದ ಆರೋಪ ಸಾಬೀತಾಗಿದ್ದರಿಂದ ಅವರಾದ (ಬಿ) ಗ್ರಾಮದ ಬಸವರಾಜ ಹಣಮಂತರಾಯ ಗೌಡಪ್ಪಗೋಳ ಎಂಬಾತನಿಗೆ ವಿಶೇಷ 1 ನೆಯ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸುಖಲಾಕ್ಷ ಪಾಲನ್ ಅವರು 2 ವರ್ಷ ಜೈಲು ಶಿಕ್ಷೆ ಮತ್ತು 5000 ರೂ ದಂಡ ವಿಧಿಸಿದ್ದಾರೆ.
ಬಸವರಾಜ ಹಣಮಂತರಾಯ ಗೌಡಪ್ಪಗೋಳನು ಭೀಮಸಿಂಗ್ ಎಂಬ ವ್ಯಕ್ತಿಯ ಕೊಲೆ ಮಾಡಿದ ಆರೋಪದಿಂದ ಜೈಲು ಸೇರಿ ಜಾಮೀನಿನ ಮೇಲೆ ಹೊರಗೆ ಬಂದಿದ್ದನು.
ಕೊಲೆಯಾದ ವ್ಯಕ್ತಿಯ ಸಂಬಂಧಿಕರು ಊರಿಗೆ ಹೊರಟಿದ್ದಾಗ ಅಲ್ಲಿಗೆ ಬಂದ ಆರೋಪಿಯು, ಕೋರ್ಟಿಗೆ ಸಾಕ್ಷಿ ಹೇಳಿದರೆ ಕೊಲೆ ಮಾಡುವದಾಗಿ ಬೆದರಿಕೆ ಹಾಕಿದ್ದನು.
ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಸಾಕ್ಷಾಧಾರಗಳನ್ನು ಪರಿಶೀಲಿಸಿ ತೀರ್ಪು ನೀಡಿದ್ದಾರೆ.
5000 ರೂ.ದಂಡ ಭರಿಸದಿದ್ದರೆ 2 ತಿಂಗಳು ಜೈಲು,ಕಲಂ 504 ಐಪಿಸಿ ಅಡಿ 1000 ರೂ ದಂಡ,ಇದನ್ನು ಭರಿಸದಿದ್ದರೆ 1 ತಿಂಗಳು ಸಜೆ,ಕಲಂ 506 ಐಪಿಸಿ ಅಡಿ 1000 ರೂ ದಂಡ,ದಂಡ ಭರಿಸದಿದ್ದರೆ 1 ತಿಂಗಳು ಸಜೆ ಮತ್ತು ದಂಡದಿಂದ ಬಂದ ಹಣದಲ್ಲಿ 5000 ರೂ ಫಿರ್ಯಾದಿಗೆ ನೀಡಲು ನ್ಯಾಯಾಧೀಶರು ಆದೇಶಿಸಿದ್ದಾರೆ. ಸರಕಾರದ ಪರವಾಗಿ 1 ನೆಯ ಅಪರ ಸರಕಾರಿ ಅಭಿಯೋಜಕ ಎಸ್.ಆರ್ ನರಸಿಂಹಲು ವಾದ ಮಂಡಿಸಿದ್ದರು.