ಸಾಕ್ಷರತೆ ರಾಷ್ಟ್ರದ ಅಭಿವೃದ್ಧಿಗೆ ಬೆನ್ನೆಲುಬು : ದಡ್ಡೆ

ಔರಾದ್:ಜು.19: ದೇಶದ ಜನಜಾಗೃತಿಗೆ, ಜೀವನ ಮಟ್ಟ ಮತ್ತು ಕೌಶಲವನ್ನು ವೃದ್ಧಿಸಲು ಸಾಕ್ಷರತೆ ಅತೀ ಅವಶ್ಯ. ಆಧುನಿಕ ಸಮಾಜದಲ್ಲಿ ಸಾಕ್ಷರತೆ ನಿತ್ಯ ಬದುಕಿನ ಒಂದು ಸಾಧನ. ಬಡತನದ ವಿರುದ್ಧ ಒಂದು ರಕ್ಷಣ ವ್ಯವಸ್ಥೆ ಎನ್ನಬಹುದು. ಪ್ರಜಾಪ್ರಭುತ್ವ ಸ್ಥಾಪನೆಗೆ ಒಂದು ವೇದಿಕೆ. ರಾಷ್ಟ್ರದ ಅಭಿವೃದ್ಧಿಗೆ ಸಾಕ್ಷರತೆ ಬೆನ್ನೆಲುಬು ಎಂದು ಪ್ರಾಂಶುಪಾಲ ಓಂ ಪ್ರಕಾಶ್ ದಡ್ಡೆ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸಂತಪೂರಿನ ಜನತಾ ಪ್ರವಿಣ ಪದವಿ ಪೂರ್ವ ಕಾಲೇಜಿನಲ್ಲಿ ಸಾಕ್ಷರತಾ ಕಲಾ ತಂಡಗಳಿಂದ ಜರುಗಿದ ಸಾಕ್ಷರತಾ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು
ಪ್ರಾಚೀನ ಕಾಲದಲ್ಲಿ ನಮ್ಮ ದೇಶವು ಜ್ಞಾನ ಮತ್ತು ವಿಜ್ಞಾನದ ಅಧ್ಯಯನದಲ್ಲಿ ಪ್ರವರ್ತಕನಾಗಿದ್ದರಿಂದ ವಿಶ್ವಗುರು ಸ್ಥಾನವನ್ನು ಹೊಂದಿತ್ತು. ಅದನ್ನು ಮತ್ತೆ ಪಡೆಯಲು ಶಿಕ್ಷಣದ ಉತ್ತೇಜನದ ಅಗತ್ಯವಿದೆ ಎಂದು ಹೇಳಿದರು.

ಜಿಲ್ಲಾ ಸಾಕ್ಷರತಾ ಅಧಿಕಾರಿ ಶಿವರಾಜ ಪಾಟೀಲ ಮಾತನಾಡಿ ಸಂಪೂರ್ಣ ಸಾಕ್ಷರತೆ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಪ್ರತಿಯೊಬ್ಬ ನಾಗರಿಕನ ಭಾಗವಹಿಸುವಿಕೆ ಅತ್ಯಂತ ಮುಖ್ಯವಾಗಿರುತ್ತದೆ. ಸಂಪೂರ್ಣ ಸಾಕ್ಷರತೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿವೆ. ಈ ಯೋಜನೆಗಳು ಯಶಸ್ಸಿಯಾಗಬೇಕಾದರೆ, ಸರ್ಕಾರ, ಸಂಘ ಸಂಸ್ಥೆಗಳ ಜೊತೆ ಸಾರ್ವಜನಿಕರು ಕೈಜೋಡಿಸಬೇಕು. ನವ ಭಾರತಕ್ಕಾಗಿ ಏಕ ಭಾರತ, ಶ್ರೇಷ್ಠ ಭಾರತ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಕರೆ ನೀಡಿದರು.

ಪತ್ರಕರ್ತ ಪರಮೇಶ ವಿಳಸಪೂರೆ ಮಾತನಾಡಿ ಕಲಿಕೆಗೆ ವಯಸ್ಸು ಮುಖ್ಯ ಅಲ್ಲ. ಮೂಲ ಅಕ್ಷರ ಕಲಿಕೆಗೆ ಒತ್ತು ನೀಡಬೇಕು. ಎಲ್ಲರೂ ಎಲ್ಲರಿಗಾಗಿ ಕಲಿಸಬೇಕು. ಇದರಿಂದ ಸಾಕ್ಷರತೆ ಪ್ರಮಾಣವನ್ನು ಹೆಚ್ಚಿಸಬಹುದು, ಜಗತ್ತಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಸಾಮಾಜಿಕ ಮತ್ತು ವೈಯಕ್ತಿಕ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಸಾಕ್ಷರತಾ ದಿನದ ಆಚರಣೆಯ ಪ್ರಮುಖ ಉದ್ದೇಶವಾಗಿದೆ ಎಂದರು.

ಈ ಸಂದರ್ಭದಲ್ಲಿ ಕಾರ್ಯಕ್ರಮ ಉದ್ದೇಶಿಸಿ ಪ್ರಾಂಶುಪಾಲ ಡಾ.ಶಿವರಾಜ ಜುಕಾಲೆ, ಕೂಡ ಮಾತನಾಡಿದರು, ಕಲಾವಿದರಾದ ದೇವಿದಾಸ ಚಿಮ್ಕೊಡ್, ಬಕ್ಕಪ್ಪಾ ದಂಡಿನ್, ವಿರಶೆಟ್ಟಿ ಕಾಲೇಜಿನ ವಿದ್ಯಾರ್ಥಿಗಳಿಗೆ ಕಿರು ನಾಟಕ ಮತ್ತು ಗಾಯನದ ಮೂಲಕ ಸಾಕ್ಷರತಾ ಬಗ್ಗೆ ಅರಿವು ಮೂಡಿಸುವುದರು.

ತಾಲೂಕ ಸಾಕ್ಷರತಾ ಅಧಿಕಾರಿ ವೆಂಕಟ್ ಕೋಳೆಕರ್, ಶಿವರಾಜ ಮಲ್ಕಾಪುರೆ, ರಮೇಶ್ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಉಪನ್ಯಾಸಕ ರಮೇಶ ಪವಾರ್ ನಿರೂಪಿಸಿದರು.


ಸಾಕ್ಷರತೆಯು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಬಹುಮುಖ್ಯ ಅಂಶವಾಗಿದ್ದು, ಸಾಕ್ಷರತೆ ವ್ಯಕ್ತಿಯನ್ನು ಸಮಾಜದಲ್ಲಿ ಘನತೆಯಿಂದ ಬದಕಲು ಸಹಾಯ ಮಾಡುವುದರ ಜತೆಗೆ ಸ್ವಾವಲಂಭಿಯಾಗಿ ಬದುಕಲು ಸಹಕರಿಸುತ್ತದೆ. ಸಾಕ್ಷರತೆಯು ಉದ್ಯೋಗ ಮತ್ತು ಶೈಕ್ಷಣಿಕ ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ.

-ಪರಮೇಶ ವಿಳಸಪೂರೆ
ಪತ್ರಕರ್ತ