ಸಾಕ್ಷರತೆಯ ಮೂಲಕ ಉತ್ತಮ ಜೀವನ ನಡೆಸಲು ಬಂದಿಗಳಿಗೆ ಹಂಚನಾಳ್ ಕರೆ

ಕಲಬುರಗಿ:ಅ.2: ಅನಕ್ಷರಸ್ಥ ಬಂದಿಗಳು ಸಾಕ್ಷರತೆಯನ್ನು ಹೊಂದುವ ಮೂಲಕ ಉತ್ತಮ ಜೀವನ ಮಾಡಬೇಕು ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಹೆಚ್.ಎಂ. ಹಂಚನಾಳ್ ಅವರು ಕರೆ ನೀಡಿದರು.
ನಗರದ ಕೇಂದ್ರ ಕಾರಾಗೃಹದಲ್ಲಿ ಸೋಮವಾರ ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಮನೂರ್ ಮಲ್ಟಿ ಸ್ಪೇಶಾಲಿಟಿ ವತಿಯಿಂದ ಕಾರಾಗೃಹದ ಬಂದಿಗಳಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಜಿಲ್ಲಾ ಪಂಚಾಯಿತಿ, ಜಿಲ್ಲಾ ಲೋಕ ಶಿಕ್ಷಣ ಇಲಾಖೆ ವತಿಯಿಂದ ನವ ಸಾಕ್ಷರಾದ ಬಂದಿಗಳಿಗೆ ಅಭಿನಂದನಾ ಪ್ರಮಾಣ ಪತ್ರಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡಿದ ಅವರು, 2022-2023ನೇ ಸಾಲಿನಲ್ಲಿ 120 ಜನ ಅನಕ್ಷರಸ್ಥರು ಬಂದಿಗಳು ಮೌಲ್ಯಪಾಪನಕ್ಕೆ ಒಳಪಟ್ಟು 120 ಜನ ಬಂದಿಗಳು ನವಸಾಕ್ಷರರಾದರು. ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಅನಕ್ಷರಸ್ಥ ಬಂದಿಗಳು ಸಾಕ್ಷರತಾ ಕಾರ್ಯಕ್ರಮದಲ್ಲಿ ಹೆಸರು ನೊಂದಾಯಿಸಿ ತಾವುಗಳು ಕೂಡ ಸಾಕ್ಷರತೆಯನ್ನು ಹೊಂದಿ ಉತ್ತಮ ಜೀವನವನ್ನು ನಡೆಸಲು ತಿಳಿಸಿದರು.
ಇನ್ನೋರ್ವ ಅತಿಥಿ ಮನೂರ್ ಮಲ್ಟಿ ಸ್ಪೇಶಾಲಿಟಿ ತೀವ್ರ ನಿಗಾ ಘಟಕದ ಡಾ. ಮೂಸ್‍ಮ್ ಮಿಲ್ ಅವರು ಮಾತನಾಡಿ, ನಮ್ಮ ಆಸ್ಪತ್ರೆಯಾದ ಮಲ್ಟಿ ಸ್ಪೇಶಾಲಿಟಿ ವತಿಯಿಂದ ಆಗಮಿಸಿದ ನಮ್ಮ ವೈದ್ಯರ ತಂಡ ಕಾರಾಗೃಹದಲ್ಲಿರುವ ಬಂದಿಗಳಿಗೆ ಉಚಿತವಾಗಿ ಆರೋಗ್ಯ ಶಿಬಿರದ ಅಡಿಯಲ್ಲಿ ಹೃದ್ರೋಗ, ಬಿ.ಪಿ ಶೂಗರ್ ಇನ್ನೀತರೇ ಕಾಯಿಲೆಗಳ ತಪಾಸಣೆಯನ್ನು ನಡೆಸಲಾಗುವುದು. ಆದಕಾರಣ ತಾವುಗಳು ಇದರ ಲಾಭವನ್ನು ಪಡೆದುಕೊಂಡು ಉತ್ತಮವಾದ ಚಿಕಿತ್ಸೆ ಹಾಗೂ ಔಷದೋಪಚಾರಣಗಳನ್ನು ಪಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾರಾಗೃಹದ ಮುಖ್ಯಸ್ಥ ಡಾ. ಪಿ. ರಂಗನಾಥ್ ಅವರು ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚಣೆ ಮಾಡಿ ಮಾತನಾಡಿ, ಗಾಂಧೀüಜಿಯವರ ಆಶಯದಂತೆ ಪ್ರತಿಯೊಬ್ಬರು ಶಿಕ್ಷಣ ಮತ್ತು ಉತ್ತಮ ಆರೋಗ್ಯವನ್ನು ಪಡೆಯಬೇಕೆಂಬುದಾಗಿತ್ತು. ಆ ನಿಟ್ಟಿನಲ್ಲಿ ಸಂಸ್ಥೆಯಲ್ಲಿ ಉಚಿತ ಆರೋಗ್ಯ ಶಿಬಿರ ಹಾಗೂ ನವ ಸಾಕ್ಷರಾದ ಬಂದಿಗಳಿಗೆ ಅಭಿನಂದನಾ ಪ್ರಮಾಣ ಪತ್ರಗಳನ್ನು ವಿತರಿಸಿದರು ಹಾಗೂ ಪ್ರತಿಯೊಬ್ಬ ಬಂದಿಗಳು ಉಚಿತ ಆರೋಗ್ಯ ಶಿಬಿರದ ಲಾಭವನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಉಚಿತ ಆರೋಗ್ಯ ತಪಾಸಣೆಯ ಶಿಬಿರದ ಅಡಿಯಲ್ಲಿ ಇಸಿಜಿ 40 ಜನ ಪುರುಷ ಹಾಗೂ 9 ಜನ ಮಹಿಳಾ ಬಂದಿಗಳಿಗೆ ತಪಾಸಣೆ ಮಾಡಲಾಯಿತು. ಬಿ.ಪಿ ಶೂಗರ್ ಹಾಗೂ ಇನ್ನೀತರೇ 145 ಜನ ಪುರುಷ ಹಾಗೂ 17 ಜನ ಮಹಿಳಾ ಬಂದಿಗಳಿಗೆ ತಪಾಸಣೆ ಮಾಡಲಾಯಿತು. ಶಿಬಿರದಲ್ಲಿ ಒಟ್ಟು 185 ಪುರುಷ ಹಾಗೂ 26 ಮಹಿಳಾ ಬಂದಿಗಳು ಸೇರಿದಂತೆ ಒಟ್ಟು 211 ಜನ ಕಾರಾಗೃಹದ ಬಂದಿಗಳು ಲಾಭವನ್ನು ಪಡೆದರು.
ಕಾರ್ಯಕ್ರಮದಲ್ಲಿ ಕಾರಾಗೃಹದ ಅಧೀಕ್ಷಕ ಬಿ.ಎಂ. ಕೊಟ್ರೇಶ್, ವೈದ್ಯಾಧಿಕಾರಿಗಳಾದ ಡಾ. ರವೀಂದ್ರ ಬನ್ನೇರ್, ಡಾ. ಅಣ್ಣಾರಾವ್ ಪಾಟೀಲ್, ಸಹಾಯಕ ಅಧೀಕ್ಷಕ ಹುಸಾನಿ ಪೀರ್, ಎಲ್ಲ ಜೈಲರ್ ವೃಂದದವರು, ಡಾ. ಜಗದೀಶ್ ಪಾಟೀಲ್, ಡಾ. ಶ್ರೀಕಾಂತ್, ಡಾ. ನಿಶಾತಾ, ಇತರೇ ವೈದ್ಯಕೀಯ ತಂಡದವರು, ಉಪನ್ಯಾಸಕ ಇಸೂಫ್ ಪಟೇಲ್, ಜಿಲ್ಲಾ ಸಂಯೋಜಕ ಶಿವಾನಂದ್ ಮುಂತಾದವರು ಪಾಲ್ಗೊಂಡಿದ್ದರು. ಶಿಕ್ಷಕ ನಾಗರಾಜ್ ಮುಲಗೆ ಅವರು ಕಾರ್ಯಕ್ರಮ ನಿರೂಪಣೆಯೊಂದಿಗೆ ಕೊನೆಯಲ್ಲಿ ವಂದಿಸಿದರು.