ಸಾಕ್ಷರತೆಯಿಂದ ಬಡತನ, ನಿರುದ್ಯೋಗ ನಿರ್ಮೂಲನೆ ಸಾಧ್ಯ: ಮಜ್ಜಗಿ

(ಸಂಜೆವಾಣಿ ವಾರ್ತೆ)
ಬಾದಾಮಿ,ಸೆ9: ಸಾಕ್ಷರತೆಯು ವ್ಯಕ್ತಿಯನ್ನು ಸಮಾಜದಲ್ಲಿ ಘನತೆಯಿಂದ ಬದುಕಲು ಸಹಾಯ ಮಾಡುವುದರ ಜೊತೆಗೆ ಸ್ವಾವಲಂಬಿಯಾಗಿ ಬದುಕಲು ಸಹಕರಿಸುತ್ತದೆ. ಇದು ಪ್ರತಿಯೊಬ್ಬರಿಗೂ ಉದ್ಯೋಗ ಮತ್ತು ಶೈಕ್ಷಣಿಕ ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ ಹಾಗೆಯೇ ಜನರನ್ನು ಬಡತನ ಮತ್ತು ನಿರುದ್ಯೋಗದಿಂದ ಹೊರಬರಲು ಸಹಾಯ ಮಾಡುತ್ತದೆ ಎಂದು ತಹಶೀಲದಾರ ಜೆ.ಬಿ.ಮಜ್ಜಗಿ ಹೇಳಿದರು.
ಜಿಲ್ಲಾ ಹಾಗೂ ತಾಲೂಕಾ ವಯಸ್ಕರ ಶಿಕ್ಷಣ ಸಮಿತಿಯ ವತಿಯಿಂದ ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ “ಸಾಮಾಜಿಕ ಚೇತನ ಕೇಂದ್ರ” ಮತ್ತು ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಾಕ್ಷರತೆಯು ವ್ಯಕ್ತಿಯ ಸಾಮಾಜಿಕ ಮತ್ತು ವಯಕ್ತಿಕ ಅಭಿವೃದ್ಧಿಗೆ ಪೂರಕವಾಗಿದೆ. ಅದು ಬಡತನದ ಪ್ರಮಾಣವನ್ನು ಕುಗ್ಗಿಸಿ ಜನಸಂಖ್ಯೆಯನ್ನು ನಿಯಂತ್ರಿಸುವುದು ಹಾಗೆಯೇ ಲಿಂಗ ತಾರತಮ್ಯ ಮತ್ತು ಅಸಮಾನತೆಯಂತಹ ಸಮಸ್ಯೆಗಳನ್ನು ನಿರ್ಮೂಲನೆ ಮಾಡುವಲ್ಲಿ ಸಾಕ್ಷರತೆಯು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೈ.ಕುಂದರಗಿ ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಯು ಓದಲು, ಬರೆಯಲು ಕಲಿಯಬೇಕೆಂಬುದೇ ಈ ಸಾಕ್ಷರತಾ ದಿನಾಚರಣೆಯ ಆಶಯ. ಶಿಕ್ಷಣವು ನಮ್ಮೆಲ್ಲರ ಜೀವನದಲ್ಲಿ ಅಭಿವೃದ್ಧಿ ಮತ್ತು ಪ್ರಗತಿಯ ಆಧಾರ ಸ್ಥಂಭವಾಗಿದೆ ಎಂದು ಹೇಳಿದರು.
ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ.ದೊಡ್ಡಪ್ಪನ್ನವರ ಮಾತನಾಡಿದರು. ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಸಾಕ್ಷರತಾ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು.
ವೇದಿಕೆಯ ಮೇಲೆ ತಾಲೂಕಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ವಿ.ಎಸ್.ಮಳಿಮಠ, ನೋಡಲ್ ಅಧಿಕಾರಿ ಎಸ್.ಎಸ್.ಯಲಿಗಾರ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬಿ.ಎಫ್.ಕುಂಬಾರ, ಸ್ಥಳೀಯ ಶಾಲೆಯ ಮುಖ್ಯಶಿಕ್ಷಕ ಬಸವರಾಜ ಕರಡಿ ಹಾಜರಿದ್ದರು.