ಸಾಕ್ಷರತೆಯಿಂದ ಬಡತನ,ನಿರುದ್ಯೋಗ ನಿರ್ಮೂಲನೆ ಸಾಧ್ಯ:ಸಂತೋಷ ಬಂಡೆ

ಇಂಡಿ: ಸೆ.8:ಸಾಕ್ಷರತೆಯು ವ್ಯಕ್ತಿಯನ್ನು ಸಮಾಜದಲ್ಲಿ ಘನತೆಯಿಂದ ಬದುಕಲು ಸಹಾಯ ಮಾಡುವುದರ ಜತೆಗೆ ಸ್ವಾವಲಂಭಿಯಾಗಿ ಬದುಕಲು ಸಹಕರಿಸುತ್ತದೆ. ಇದು ಪ್ರತಿಯೊಬ್ಬರಿಗೂ ಉದ್ಯೋಗ ಮತ್ತು ಶೈಕ್ಷಣಿಕ ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ ಹಾಗೆಯೇ ಜನರನ್ನು ಬಡತನ ಮತ್ತು ನಿರುದ್ಯೋಗದಿಂದ ಹೊರಬರಲು ಸಹಾಯ ಮಾಡುತ್ತದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಶುಕ್ರವಾರ ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಅಂತರಾಷ್ಟ್ರೀಯ ಸಾಕ್ಷರತಾ ದಿನವನ್ನು ಉದ್ಘಾಟಿಸಿ ಮಾತನಾಡಿದರು.
ಸಾಕ್ಷರತೆಯು ವ್ಯಕ್ತಿಯ ಸಾಮಾಜಿಕ ಮತ್ತು ವೈಯಕ್ತಿಕ ಅಭಿವೃದ್ಧಿಗೆ ಪೂರಕವಾಗಿದೆ. ಅದು ಬಡತನ ಪ್ರಮಾಣವನ್ನು ಕುಗ್ಗಿಸಿ, ಜನಸಂಖ್ಯೆಯನ್ನು ನಿಯಂತ್ರಿಸುವುದು ಹಾಗೆಯೇ ಲಿಂಗ ತಾರತಮ್ಯ ಮತ್ತು ಅಸಮಾನತೆಯಂತಹ ಸಮಸ್ಯೆಗಳ ನಿರ್ಮೂಲನೆ ಮಾಡುವಲ್ಲಿ ಸಾಕ್ಷರತೆಯು ಪ್ರಮುಖ ಪಾತ್ರವಹಿಸುತ್ತದೆ ಎಂದು ಹೇಳಿದರು.
ಶಿಕ್ಷಕಿ ಎನ್ ಬಿ ಚೌಧರಿ ಮಾತನಾಡಿ, ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯು ಓದಲು, ಬರೆಯಲು
ತಿಳಿದಿರಬೇಕು ಎನ್ನುವುದೇ ಈ ಸಾಕ್ಷರತಾ ದಿನದ ಆಶಯ.
ಶಿಕ್ಷಣವು ನಮ್ಮೆಲ್ಲರ ಜೀವನದಲ್ಲಿ ಅಭಿವೃದ್ಧಿ ಮತ್ತು ಪ್ರಗತಿಯ ಪ್ರಮುಖ ಆಧಾರಸ್ತಂಭವಾಗಿದೆ. ವೈಯಕ್ತಿಕ, ಸಮುದಾಯ ಮತ್ತು ಸಮಾಜದ ಅಭಿವೃದ್ಧಿಗಾಗಿ ಶಿಕ್ಷಣ ಕ್ಷೇತ್ರದಲ್ಲಿ ಜನರಿಗೆ ಅರಿವು ಮೂಡಿಸಬೇಕಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಶಿಕ್ಷಕ ಎಸ್ ಎಸ್ ಅರಬ ಮಾತನಾಡಿ,ಸಾಕ್ಷರತೆಯು ದುಃಖದಿಂದ ಭರವಸೆಗೆ
ಸೇತುವೆಯಾಗಿದೆ.ಅನಕ್ಷರಸ್ಥರಿಗೆ ಓದುವ, ಬರೆಯುವ ಮತ್ತು ಗಣಿತದ ಶಕ್ತಿಯನ್ನು ತಿಳಿಸಬೇಕು. ಸರಳ ಲೆಕ್ಕಾಚಾರಗಳು ನಮ್ಮನ್ನು ತಾರ್ಕಿಕವಾಗಿ ಯೋಚಿಸುವಂತೆ ಮಾಡುತ್ತವೆ. ನಾವು ಸಾಕ್ಷರರಾದಾಗ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯ ಎಂದು ಹೇಳಿದರು.
ಶಿಕ್ಷಕಿ ಎಸ್ ಪಿ ಪೂಜಾರಿ ಸೇರಿದಂತೆ ಮಕ್ಕಳು ಭಾಗವಹಿಸಿದ್ದರು.