ಸಾಕ್ಷರತಾ ಪರೀಕ್ಷೆಯಲ್ಲಿ ಶತಾಯುಷಿ ಮಹಿಳೆಯ ಸಾಧನೆ

ಕೊಚ್ಚಿ, ನ ೧೭- ಕೇರಳ ಸರ್ಕಾರ ನಡೆಸಿದ ಪ್ರಾಥಮಿಕ ಸಾಕ್ಷರತೆ ಪರೀಕ್ಷೆಯಲ್ಲಿ ೧೦೪ ವರ್ಷದ ವೃದ್ಧೆಯೊಬ್ಬರು ಉತ್ತೀರ್ಣರಾಗುವ ಮೂಲಕ ಗಮನ ಸೆಳೆದಿದ್ದಾರೆ.

೧೦೪ ವರ್ಷದ ಕುಟ್ಟಿಯಮ್ಮ ಈ ಸಾಧನೆ ಮಾಡಿದ್ದಾರೆ. ಅವರಿಗೆ ಅಭಿನಂದನೆ ಮತ್ತು ಪ್ರಶಂಸೆಗಳ ಮಹಾಪೂರವೇ ಹರಿದು ಬರುತ್ತಿದೆ. ಕೇರಳ ರಾಜ್ಯ ಸಾಕ್ಷರತಾ ಮಿಷನ್‌ನ ವಿದ್ಯಾರ್ಥಿಗಳ ಪ್ರಾಥಮಿಕ ಜ್ಞಾನವನ್ನು ಪರೀಕ್ಷಿಸುವ ಯೋಜನೆಯಾದ ‘ಮಿಗವುಲ್ಸವಂ’ ಅಂಗವಾಗಿ ನಡೆಸಿದ ಪರೀಕ್ಷೆಯಲ್ಲಿ ಕೋಟ್ಟಯಂ ಜಿಲ್ಲೆಯ ಆಯರ್ಕುನ್ನಂ ಪಂಚಾಯತ್‌ನ ಕುಟ್ಟಿಯಮ್ಮ ೧೦೦ ಅಂಕದಲ್ಲಿ ೮೯ ಅಂಕಗಳನ್ನು ಗಳಿಸಿದ್ದಾರೆ. ಕುಟ್ಟಿಯಮ್ಮನಂತೆಯೇ ಪರೀಕ್ಷೆಯಲ್ಲಿ ತೇರ್ಗಡೆಯಾದವರು ನಾಲ್ಕನೇ ತರಗತಿಯ ಸಮಾನ ಸಾಕ್ಷರತಾ ಪರೀಕ್ಷೆಗೆ ಕುಳಿತುಕೊಳ್ಳಲು ಅರ್ಹರಾಗಿದ್ದಾರೆ.

ರಾಜ್ಯ ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ ಈ ಶತಾಯುಷಿಯ ದೃಢತೆ ಮತ್ತು ಸಂಕಲ್ಪಕ್ಕಾಗಿ ಅಭಿನಂದಿಸಿದ್ದಾರೆ. ಅಕ್ಷರ, ಪದ ಮತ್ತು ಜ್ಞಾನದ ಜಗತ್ತಿಗೆ ಪ್ರವೇಶಿಸಲು ವ್ಯಕ್ತಿಯ ವಯಸ್ಸು ಅಡ್ಡಿಯಾಗುವುದಿಲ್ಲ ಎಂಬುದನ್ನು ಕುಟ್ಟಿಯಮ್ಮ ತೋರಿಸಿಕೊಟ್ಟರು. ಗುರಿಗಳನ್ನು ಸಾಧಿಸುವ ಮನಸ್ಸು ಇದ್ದರೆ, ವಯಸ್ಸು ಕೇವಲ ಒಂದು ಸಂಖ್ಯೆ ಎಂದು ಸಚಿವರು ಹೇಳಿದ್ದಾರೆ. ನವೆಂಬರ್ ೧೦ ರಂದು ಫಲಿತಾಂಶ ಪ್ರಕಟವಾದ ನಂತರ ಆಯರ್ಕುನ್ನಂ ಪಂಚಾಯತ್ ಕೌನ್ಸಿಲ್ ಸದಸ್ಯರು ಕುಟ್ಟಿಯಮ್ಮ ಅವರ ನಿವಾಸಕ್ಕೆ ಭೇಟಿ ನೀಡಿ ಅವರನ್ನು ಸನ್ಮಾನಿಸಿದರು. ಆಕೆಯ ಸಾಧನೆಗೆ ಅಭಿನಂದಿಸಲು ಸಿಪಿಐ(ಎಂ) ಮತ್ತು ಬಿಜೆಪಿಯ ಜಿಲ್ಲಾ ಮುಖಂಡರು ಕೂಡ ಅವರ ಮನೆಗೆ ಭೇಟಿ ನೀಡಿದ್ದಾರೆ.

ಪರೀಕ್ಷೆಗೆ ಎರಡು ತಿಂಗಳ ಮೊದಲು ಕುಟ್ಟಿಯಮ್ಮ ಮತ್ತು ಇತರ ಆರು ವಿದ್ಯಾರ್ಥಿಗಳಿಗೆ ಪಾಠ ಮಾಡಿರುವುದಾಗಿ ರೆಹನಾ ಹೇಳಿದ್ದಾರೆ. ಕುಟ್ಟಿಯಮ್ಮ ತುಂಬಾ ಕ್ರಿಯಾಶೀಲಳಾಗಿದ್ದು, ಯಾರ ಸಹಾಯವೂ ಇಲ್ಲದೇ ತನ್ನಷ್ಟಕ್ಕೆ ತಾನೇ ಮನೆ ಸುತ್ತಾಡಬಲ್ಲವರಾಗಿದ್ದರು. “ಆದಾಗ್ಯೂ, ಅವರಿಗೆ ಕಿವಿ ಸ್ವಲ್ಪ ಕಡಿಮೆ ಕೇಳಿಸುತ್ತಿದ್ದು ಮತ್ತು ರಾತ್ರಿಯಲ್ಲಿ ಅವರ ದೃಷ್ಟಿ ದುರ್ಬಲವಾಗಿರುತ್ತದೆ” ಎಂದು ಕುಟ್ಟಿಯಮ್ಮಗೆ ತರಬೇತಿ ನೀಡಿದ ಸಾಕ್ಷರತಾ ಪ್ರೇರಕ ರೆಹನಾ ಅವರು ಹೇಳಿದರು.