ಕಲಬುರಗಿ,ಜು 18: ತಾಲೂಕಿನ ನಂದಿಕೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀತನೂರು ಗ್ರಾಮದಲ್ಲಿ ಸಾಕುಹಂದಿಗಳು ಕಬ್ಬಿನ ಜಮೀನುಗಳಿಗೆ ನುಗ್ಗಿ ಫಸಲನ್ನು ಹಾಳು ಮಾಡುತ್ತಿದ್ದು, ಈ ಕುರಿತು ತಂಡ ರಚಿಸಿ ಸಮೀಕ್ಷೆ ಕೈಗೊಂಡು ರೈತರಿಗೆ ಸೂಕ್ತ ಪರಿಹಾರ ನೀಡಬೇಕು.ಹಂದಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸೀತನೂರ ಗ್ರಾಮಸ್ಥರು ಇಂದು ನಂದಿಕೂರ ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಪವನಕುಮಾರ ವಳಕೇರಿ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು
ಸೀತನೂರು ಗ್ರಾಮದಲ್ಲಿ ಸುಮಾರು ಎಕರೆಗಳಲ್ಲಿ ಕಬ್ಬು ಬೆಳೆಯನ್ನು ಬೆಳೆಯಲಾಗಿರುತ್ತದೆ.ಈ ಬಾರಿ ಮಳೆ ಸರಿಯಾದ ಸಮಯಕ್ಕೆ ಬಾರದ ಕಾರಣ ಕಬ್ಬು ಒಣಗಿ ಹೋಗಿರುತ್ತದೆ. ಆದರೆ ಕೆಲವು ರೈತರು ಜಮೀನುಗಳಲ್ಲಿ ಅಲ್ಲಲ್ಲಿ ನೀರು ದೊರೆತ್ತಿದ್ದನ್ನು ಉಪಯೋಗಿಸಿಕೊಂಡು ಆದಷ್ಟು ಕಬ್ಬು ಬೆಳೆಯನ್ನು ಕಾಪಾಡಿಕೊಂಡು ಬರಲಾಗುತ್ತಿದೆ.ಹೀಗಿರುವಾಗ ಗ್ರಾಮದ ಕಬ್ಬು ಜಮೀನುಗಳಲ್ಲಿ ಸಾಕು ಹಂದಿಗಳ ಕಾಟ ಹೆಚ್ಚಾಗಿದ್ದು, ಹಂದಿಗಳು ಚೆನ್ನಾಗಿ ಬೆಳೆದ ಕಬ್ಬಿನ ಜಮೀನುಗಳಿಗೆ ನುಗ್ಗಿ ಅಲ್ಲಿರುವ ಫಸಲವನ್ನು ಹಾಳು ಮಾಡುತ್ತಿವೆ.ಈ ಕುರಿತು ಹಂದಿ ಸಾಕಾಣಿಕೆಗಾರರಿಗೆ ಹಲವಾರು ಬಾರಿ ಮನವಿ ಮಾಡಿಕೊಂಡರು ಸಹ ಅವರು ಯಾವುದೇ ಕ್ರಮ ಕೈಗೊಳ್ಳದೇ ಬೇಜವಾಬ್ದಾರಿತನವನ್ನು ತೋರುತ್ತಿದ್ದಾರೆ.ಇದರಿಂದ ಕಬ್ಬು ಬೆಳೆಗಾರರಾದ ಸೀತನೂರ ಗ್ರಾಮದ ರೈತರು ಬೇರೆ ದಾರಿ ಕಾಣದೆ ಕಂಗಾಲಾಗಿದ್ದಾರೆ ಎಂದು ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಅಮೀರ ಪಟೇಲ್ ಮಾಲಿ, ಶಿವಯ್ಯ ಸ್ವಾಮಿ, ವೀರಣ್ಣ ಮಲ್ಕೂಡ, ಪೀರ್ ಸಾಬ್ ಜಮಾದಾರ್, ಸಿದ್ದಣ್ಣ ಜಮ್ದಿ, ಮೈಬುಸಾಬ್ ಮಾಲಿ, ರಾಜು ಪೂಜಾರಿ, ಮೌಲಾಸಾಬ್ ಜಮಾದಾರ್, ಸಾಯಬ ಪಟೇಲ್ ಮಾಲಿ, ಶಿವಲಿಂಗಪ್ಪ ಜಮ್ದಿ, ಅಲಿಸಾ ದಂಗಾಪುರ್ ಉಪಸ್ಥಿತರಿದ್ದರು.