ಸಾಂಸ್ಥಿಕ ಹೆರಿಗೆ ಸುರಕ್ಷಿತ ಮಾತೃತ್ವ ಸಹಕಾರಿ

ಚಿತ್ರದುರ್ಗ.ಜೂ.೧೫: ಸಾಂಸ್ಥಿಕ ಹೆರಿಗೆ ಸುರಕ್ಷಿತ ಮಾತೃತ್ವಕ್ಕೆ ಸಹಕಾರಿಯಾಗಿದೆ ಎಂದು ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ. ತುಳಸಿ ರಂಗನಾಥ್ ಹೇಳಿದರು.
ಸಿರಿಗೆರೆ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ  ಸಾಂಸ್ಥಿಕ ಹೆರಿಗೆ ಬಲಪಡಿಸುವ ಸಲುವಾಗಿ ಆಯೋಜಿಸಿದ್ದ ಸಭೆಯಲ್ಲಿ  ಹಿರೆಗುಂಟನೂರು ವಿಜಾಪುರಿಕ ಆರೋಗ್ಯ ಕೇಂದ್ರಗಳ ಆಶಾ ಕಾರ್ಯಕರ್ತರು ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳ ಉದ್ದೇಶಿಸಿ ಮಾತನಾಡಿದರು.ಕೋವಿಡ್ 19 ಕಾರಣದಿಂದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಪ್ರಮಾಣ ಕುಂಠಿತವಾಗಿದೆ. ಜನನಿ ಸುರಕ್ಷಾ ಯೋಜನೆ ಅಡಿ ಸಾಂಸ್ಥಿಕ ಹೆರಿಗೆಗಳನ್ನ ನಿರ್ವಹಿಸುವುದು ಸಮುದಾಯ ಆರೋಗ್ಯ ಕೇಂದ್ರಗಳ ಮುಖ್ಯ ಕರ್ತವ್ಯವಾಗಿದೆ. ಮತ್ತೊಮ್ಮೆ ಸಮುದಾಯ ಕೇಂದ್ರಗಳಲ್ಲಿ ಹೆರಿಗೆ ಸಂಖ್ಯೆಯನ್ನು ಹೆಚ್ಚಿಸಬೇಕು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಸಭೆಯ ನಡಾವಳಿಯಂತೆ ಆಶಾ ಕಾರ್ಯಕರ್ತರಿಗೆ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳಿಗೆ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗೆ ಹೆರಿಗೆ ಪ್ರಮಾಣ ಹೆಚ್ಚಳದ ಗುರಿ ನಿಗದಿ ಪಡಿಸಲಾಗಿದೆ. ಎಲ್ಲಾ ಸಿಬ್ಬಂದಿಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. ಸಾಂಸ್ಥಿಕ  ಹೆರಿಗೆಗಳು ಹೆಚ್ಚಾಗಬೇಕು ಎಂದರು.