
ಬ್ಯಾಡಗಿ,ಏ10: ಖ್ಯಾತ ಪತ್ರಕರ್ತರು ಹಾಗೂ ಸಾಹಿತಿಗಳಾದ ಪಾಪುರವರ ಮಾನಸ ಪುತ್ರಿಯಾಗಿದ್ದ ಬ್ಯಾಡಗಿಯ ಮಹಿಳಾ ಸಾಹಿತಿ ಸಂಕಮ್ಮ ಸಂಕಣ್ಣನವರ ಸ್ತ್ರೀ ಪರ ಚಿಂತನೆ ಮತ್ತು ಸಮಾಜದ ಅಂಕಡೊಂಕು ತಿದ್ದುವಲ್ಲಿ ಹಿಂದೆ ಬಿದ್ದವರಲ್ಲ. ಬರೆದಂತೆ ಬದುಕುವ ಕೆಲವೇ ಕೆಲವು ಸಾಹಿತಿಗಳಲ್ಲಿ ಸಂಕಮ್ಮನವರು ಹಾವೇರಿ ಜಿಲ್ಲೆಯ ಸಾಹಿತ್ಯದ ಐಕಾನ ಎಂದು ಪತ್ರಮಿತ್ರ ಸಂಸ್ಕೃತಿಯ ಸಾಹಿತಿ ಪಿಸುಮಾತು ಪತ್ರಿಕೆಯ ಸಂಪಾದಕರಾದ ದಾಳೇಗೌಡರು ಶ್ಲ್ಯಾಘಿಸಿದರು.
ಶಿವಮೊಗ್ಗದ ಪತ್ರ ಸಂಸ್ಕೃತಿ ಸಮ್ಮೇಳನದಲ್ಲಿ ಬ್ಯಾಡಗಿಯ ಸಾಹಿತಿ ಸಂಕಮ್ಮ ಸಂಕಣ್ಣನವರ ಮತ್ತು ಗೋಣೆಪ್ಪ ಸಂಕಣ್ಣನವರ ಇವರಿಗೆ “ಸಾಂಸ್ಕೃತಿಕ ರಾಯಭಾರಿ ದಂಪತಿಗಳು” ಎಂದು ಪ್ರಶಸ್ತಿ ನೀಡಲಾಗಿತ್ತು. ಆದರೆ ಸಂಕಮ್ಮನವರ ಅವರ ಅನಾರೋಗ್ಯದ ನಿಮಿತ್ತ ಆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಪತ್ರ ಸಂಸ್ಕೃತಿಯ ಮಿತ್ರರು ಬ್ಯಾಡಗಿಯಲ್ಲಿನ ಅವರ ನಿವಾಸಕ್ಕೆ ಬಂದು ಪ್ರಶಸ್ತಿಯನ್ನು ವಿತರಿಸಿ ಸನ್ಮಾನಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಹೊಸ ತಲೆಮಾರಿನ ಬರಹಗಾರರಿಗೆ ಸಂಕಮ್ಮ ಪ್ರೇರಣೆಯೆಂದರು. ಈ ದಂಪತಿಗಳ ಸಾಹಿತ್ಯಿಕ ಪ್ರೀತಿಗೆ ಸಾಂಸ್ಕೃತಿಕ ರಾಯಭಾರಿ ಪ್ರಶಸ್ತಿಗೆನೆ ಗೌರವ ಬಂದಂತಾಗಿದೆ ಎಂದರು.
ಶಿವಮೊಗ್ಗದ ಪತ್ರ ಸಂಸ್ಕೃತಿ ಸಂಘಟನೆಯ ರೂವಾರಿಗಳಾದ ಸಾಹಿತಿ ಹಾಗೂ ಕಲಾವಿದರಾದ ದಾಳೇಗೌಡರು, ಸುಂದರ ಮತ್ತು ಉಮಾ ಅವರು ಭಾನುವಾರ ಸಂಕಣ್ಣನವರ ಮನೆಗೆ ಆಗಮಿಸಿ ದಂಪತಿಗಳಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸುವ ಮೂಲಕ ಸನ್ಮಾನಿಸಿದರು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಸಾಹಿತಿ ಸಂಕಮ್ಮ ಸಂಕಣ್ಣನವರ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ತಮ್ಮನ್ನು ಸನ್ಮಾನಿಸಿ ಗೌರವಿಸಿದ ಸಂಘಟನೆಯ ಪದಾಧಿಕಾರಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ “ಸಾಂಸ್ಕೃತಿಕ ರಾಯಭಾರಿ ದಂಪತಿಗಳು” ಪ್ರಶಸ್ತಿ ಪಡೆದ ಸಂಕಮ್ಮ ಸಂಕಣ್ಣನವರ ಮತ್ತು ಗೋಣೆಪ್ಪ ಸಂಕಣ್ಣನವರ ಅವರನ್ನು ಬ್ಯಾಡಗಿಯ ಸಾಹಿತ್ಯ ಬಳಗದ ಜೀವರಾಜ ಛತ್ರದ, ಶಕುಂತಲಾ ದಾಳೇರ, ಜಮೀರ್ ರಿತ್ತಿ, ಭಾಗ್ಯ, ಮಂಗಳಾ, ಸುಶೀಲಾ ಸಂಕಣ್ಣನವರ, ರೇಖಾ, ಚಂದ್ರು ಛತ್ರದ, ಹರ್ಷ, ನಂದಾ ಬಾಳಿಕಾಯಿ ಸೇರಿದಂತೆ ಇನ್ನಿತರರು ಅಭಿನಂದಿಸಿದರು.