ಸಾಂಸ್ಕøತಿಕ ಬದುಕಿಗೆ ಸಂಸ್ಕಾರ ಅಗತ್ಯ: ವಾಲದೊಡ್ಡಿ

ಭಾಲ್ಕಿ:ಜ.14: ಮನುಷ್ಯ ಮಾದರಿ ಜೀವನ ಬದುಕಲು ಸಂಸ್ಕಾರ ಅಗತ್ಯವಿದ್ದು, ಇದು ಸಾಂಸ್ಕøತಿಕ ಬದುಕಿಗೆ ಪೂರಕವಾಗಲಿದೆ ಎಂದು ಹಿರಿಯ ಜಾನಪದ ವಿದ್ವಾಂಸರಾದ ಶಂಭುಲಿಂಗ ವಾಲ್ದೊಡ್ಡಿ ತಿಳಿಸಿದರು.

ಶುಕ್ರವಾರ ತಾಲೂಕಿನ ನಿಟ್ಟೂರ್(ಬಿ) ಗ್ರಾಮದ ಮಹಾತ್ಮ ಜ್ಯೋತಿಬಾ ಫುಲೆ ಮಹಾವಿದ್ಯಾಲಯದಲ್ಲಿ ನೆಹರು ಯುವ ಕೇಂದ್ರ ಬೀದರ್, ಸ್ವಾಮಿ ವಿವೇಕಾನಂದ ಯುವಶಕ್ತಿ ಕೇಂದ್ರ ಕಾಳಸರತುಗಾಂವ, ಭಾರತ ಯುತ್ ವೆಲಫೆರ್ ಏಜ್ಯುಕೆಶನ್ ಆ್ಯಂಡ್ ರೂರಲ್ ಡೆವಲಪಮೆಂಟ್ ಸೂಸೈಟಿ ಮತ್ತು ಜ್ಞಾನ ಉದಯ ಶಿಕ್ಷಣ ಸಂಸ್ಥೆ ಬಾಳೂರ ಇವರ ಸಂಯುಕ್ತಾಶ್ರಯದಲ್ಲಿ ಸ್ವಾಮಿ ವಿವೇಕಾನಂದರ 161ನೇ ಜಯಂತ್ಯೋತ್ಸವ ಅಂಗವಾಗಿ ರಾಷ್ಟ್ರೀಯ ಯುವ ದಿನ ಹಾಗೂ ಸಪ್ತಾಹ ನಿಮಿತ್ಯ ಜರುಗಿದ ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂಗೀತ, ಸಾಹಿತ್ಯ, ಕಲೆ ಇವು ನಮ್ಮಲ್ಲಿ ಸನ್ನಡತೆಗೆ ದಾರಿ ಮಾಡುತ್ತವೆ, ಜವಾಬ್ದಾರಿಯಿಂದ ವರ್ತಿಸಲು ಪ್ರೇರೆಪಿಸುತ್ತವೆ, ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುವಂತಾಗಲು ನಿತ್ಯ ಒಂದಾದರೊಂದು ಹಾಡು ಹಾಡುತ್ತ ನಮ್ಮ ನಿತ್ಯ ಕಾಯಕದಲ್ಲಿ ತಲ್ಲಿನರಾಗಿರಬೇಕೆಂದು ಹೇಳಿದರು.

ವಿವೇಕಾನಂದರು ಜಗತ್ತಿಗೆ ಅಧ್ಯಾತ್ಮವನ್ನು ಪರಿಚಯಿಸಿದರೆ, ಡಾ.ಬಿ.ಆರ್ ಅಂಬೇಡ್ಕರ್ ಅವರು ಜ್ಞಾನವನ್ನು ಪ್ರಚುರಪಡಿಸಿದರು. ಈ ಎರಡು ರತ್ನಗಳು ನಮ್ಮ ನೆಲದಲ್ಲಿ ಹುಟ್ಟಿದಕ್ಕೆ ಹೆಮ್ಮೆ ಪಡಬೇಕು, ಅವರ ಆದರ್ಶ ಬದುಕು, ತಾತ್ವಿಕ ಮತ್ತು ಸಿದ್ದಾಂತಗಳು ನಮ್ಮ ನಿತ್ಯದ ಉಸಿರಾಗಬೇಕೆಂದು ವಾಲ್ದೊಡ್ಡಿ ಕರೆ ಕೊಟ್ಟರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಾಹಿತಿ ನಾಗೇಶ ಸ್ವಾಮಿ ಮಸ್ಕಲ್ ಅವರು ಮಾತನಾಡಿ, ಜೀವನದಲ್ಲಿ ದೊಡ್ಡ ಗುರಿ ಇರಬೇಕು. ಸಣ್ಣ ಉದ್ದೇಶ ನಮ್ಮ ಬದುಕಿಗೆ ದೊಡ್ಡ ಅಪರಾಧ. ನಿರ್ದಿಷ್ಟ ಗುರಿ ಸಾಧನೆಗೆ ವಿವೇಕಾನಂದರಂತಹ ಮಹಾತ್ಮರ ಮಾರ್ಗದರ್ಶನ ಹಾಗೂ ಸಂದೇಶ ಅಗತ್ಯವಿದೆ ಎಂದರು.

ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಬಾಬುರಾವ ಮಾಳಗೆ ಮಾತನಾಡಿ, ಜೀವನದ ಮೊಟ್ಟ ಮೊದಲ ಹೆಜ್ಜೆ ಎಂದರೆ ಶಿಸ್ತು. ಸುಸ್ತು ರಹಿತ ಬದುಕಿಗೆ ಶಿಸ್ತು ಅಗತ್ಯ. ಶಿಸ್ತು ನಮ್ಮನ್ನು ಸಮಾಜದಲ್ಲಿ ತಲೆ ಎತ್ತಿ ಬದುಕುವಂತೆ ಮಾಡುತ್ತದೆ. ಹಾಗಾಗಿ ಮೊದಲು ಶಿಸ್ತು ನಂತರ ವಿದ್ಯೆ ವಿದ್ಯಾರ್ಥಿಗಳ ಭೂಷಣವಾಗಬೇಕೆಂದು ತಿಳಿಸಿದರು.

ರಾಜ್ಯ ಯುವ ಪ್ರಶಸ್ತಿ ಪುರಸ್ಕøತರು ಹಾಗೂ ಸ್ವಾಮಿ ವಿವೇಕಾನಂದ ಯುವಶಕ್ತಿ ಕೇಂದ್ರದ ಅಧ್ಯಕ್ಷ ಶಿವಕುಮಾರ ಸ್ವಾಮಿ ಪ್ರಾಸ್ತಾವಿಕ ಮಾತನಾಡಿ, ನನ್ನ ಒತ್ತಡದ ಬದುಕಿನಲ್ಲೂ ಕಳೆದ ಒಂದು ದಶಕದಿಂದ ನಿರಂತರವಾಗಿ ರಾಷ್ಟ್ರೀಯ ಯುವ ಸ್ತಾಹ ಇಡೀ ಜಿಲ್ಲೆಯ ಎಲ್ಲ ತಾಲೂಕುಗಲಲ್ಲಿ ತಲಾ ಒಂದರಂತೆ ಕಾರ್ಯಕ್ರಮ ಮಾಡುವ ಪರಿಪಠ ನಡೆಯುತ್ತಿದ್ದು, ಇದು ಎರಡನೇ ಕಾರ್ಯಕ್ರಮವಾಗಿದೆ ಎಂದರು. ಜ್ಞಾನ ಉದಯ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ನಾಗೇಶ ಚಲವಾ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಸಂತೋಷ ಚಟ್ಟಿ, ಕಾಲೇಜಿನ ಉಪನ್ಯಾಸಕರಾದ ಉಮಾಕಾಂತ ಶರ್ಮಾ, ನಾಗನಾಥ ಬಿರಾದಾರ, ಸತೀಶ ಶಿಂಧೆ, ಶಿವರಾಜ ಪಾಟೋಳೆ, ಕಲಾವತಿ ಡೋಂಗ್ರೆ, ನಾರಾಯಣ ನೇಳಗೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆಯ ಯುವ ಸ್ಪಂದನದ ಮೇಲ್ವಿಚಾರಕಿ ಜಯಶ್ರೀ ಮೇತ್ರೆ ವಂದಿಸಿದರು.