ಸಾಂತ್ವನ ಕೇಂದ್ರ-ವೃದ್ಧಾಶ್ರಮಕ್ಕೆ ಜಿ.ಪಂ.ಸಿಇಓ ರಾಹುಲ್ ಶಿಂಧೆ ಭೇಟಿ-ಪರಿಶೀಲನೆ

(ಸಂಜೆವಾಣಿ ವಾರ್ತೆ)
ವಿಜಯಪುರ:ಜು.19: ವಿಜಯಪುರ ನಗರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅನುದಾನದಲ್ಲಿ ವಿಜಯಪುರ ನಗರದಲ್ಲಿ ನಡೆಯುತ್ತಿರುವ ಸಾಂತ್ವನ ಕೇಂದ್ರ ಮತ್ತು ವೃದ್ಧಾಶ್ರಮಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದ ಗಣೇಶ ನಗರದಲ್ಲಿ ಶ್ರೀಧರ ಸ್ವಾಮಿ ವಿದ್ಯಾವರ್ಧಕ ಸಂಸ್ಥೆಯ ಸಹಯೋಗದಲ್ಲಿ ನಡೆಯುತ್ತಿರುವ ಸಾಂತ್ವನ ಕೇಂದ್ರಕ್ಕೆ ಭೇಟಿ ನೀಡಿ, ಸಾಂತ್ವನ ಕೇಂದ್ರದ ಮುಖ್ಯಸ್ಥ ಕೆ.ಎನ್.ಮೇಟಿ ಅವರಿಂದ ಕೇಂದ್ರದ ಕಾರ್ಯನಿರ್ವಹಣೆ ಹಾಗೂ ಒದಗಿಸಲಾಗುತ್ತಿರುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದ ಅವರು, ನೊಂದವರಿಗೆÉ ಸಮರ್ಪಕವಾಗಿ ಸ್ಪಂದಿಸುವುದರೊಂದಿಗೆ ಅವರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು. ಅತ್ಯಂತ ತಾಳ್ಮೆಯಿಂದ ಅವರೊಡನೆ ಸಮಾಲೋಚನೆ ಮಾಡಬೇಕು. ಅವರ ಸಮಸ್ಯೆಗಳನ್ನು ಸರಿಯಾಗಿ ಅರ್ಥೈಸಿಕೊಂಡು ಸೂಕ್ತ ಪರಿಹಾರ ಒದಗಿಸಬೇಕು. ಜಿಲ್ಲೆಯ ಕಾರ್ಯನಿರ್ವಹಿಸುತ್ತಿರುವ 6 ಸಾಂತ್ವನ ಕೇಂದ್ರಗಳ ಕುರಿತು ಹಾಗೂ ಕೇಂದ್ರಗಳ ಕಾರ್ಯನಿರ್ವಹಣೆ ಕುರಿತು ಜನರಲ್ಲಿ ಅರಿವು ಮೂಡಿಸಬೇಕು. ಗ್ರಾಮೀಣ ಭಾಗದಲ್ಲಿ ಹೆಚ್ಚಿಗೆ ಸಾಂತ್ವನ ಕೇಂದ್ರಗಳ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಕೇಂದ್ರ ಪ್ರಾರಂಭವಾದಾಗಿನಿಂದ ಪ್ರಸ್ತುತವರೆಗೆ ದಾಖಲಾದ ಒಟ್ಟು ಪ್ರಕರಣಗಳ ಮಾಹಿತಿ ಪಡೆದುಕೊಂಡರು. ಸಾಂತ್ವನ ಕೇಂದ್ರ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ 4,640 ಪ್ರಕರಣಗಳು ದಾಖಲಾಗಿದ್ದು, ಈ ವರ್ಷ 68 ಪ್ರಕರಣಗಳು ದಾಖಲಾಗಿವೆ. 53 ಪ್ರಕರಣಗಳು ಇತ್ಯರ್ಥವಾಗಿದ್ದು, ಕೇವಲ 15 ಪ್ರಕರಣಗಳು ಬಾಕಿ ಉಳಿದಿವೆ ಎಂದು ಕೇಂದ್ರದ ಮಾಹಿತಿ ಒದಗಿಸಲಾಯಿತು.
ನಗರದ ಹೊರವಲಯದಲ್ಲಿರುವ ಶ್ರೀ ಸಿದ್ದೇಶ್ವರ ವಿದ್ಯಾಪೀಠ ಸಂಸ್ಥೆಯ ವತಿಯಿಂದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅನುದಾನದಲ್ಲಿ ನಡೆಯುತ್ತಿರುವ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಕೇಂದ್ರದ ಮುಖ್ಯಸ್ಥೆ ಶ್ರೀಮತಿ ಅನ್ನಪೂರ್ಣಾ ಬಿರಾದಾರ ಅವರಿಂದ ಮಾಹಿತಿ ಪಡೆದ ಅವರು, ವೃದ್ಧಾಶ್ರಮದ ಕಟ್ಟಡವು ಅತ್ಯಂತ ಸುಸಜ್ಜಿತವಾಗಿದ್ದು ಇನ್ನೂ ಸಾಕಷ್ಟು ಸ್ಥಳಾವಕಾಶವಿದೆ. ಹೀಗಾಗಿ ವೃದ್ಧಾಶ್ರಮಕ್ಕೆ ನೀಡಲಾದ 25 ಜನರ ಮೀತಿಯನ್ನು 40ಕ್ಕೆ ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ವೃದ್ಧಾಶ್ರಮದಲ್ಲಿರುವ ವೃದ್ಧರೊಡನೆ ಸಮಾಲೋಚನೆ ನಡೆಸಿ, ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡರು. ನಂತರ ವೃದ್ಧಾಶ್ರಮದ ಪಕ್ಕದಲ್ಲಿ ಸಿದ್ಧಗೊಳ್ಳುತ್ತಿರುವ ಮಕ್ಕಳ ತೆರೆದ ತಂಗುದಾಣಕ್ಕೆ ಭೇಟಿ ನೀಡಿ ಅಲ್ಲಿ ಮಕ್ಕಳಿಗಾಗಿ ಸಿದ್ಧಪಡಿಸಲಾದ ಕೋಣೆಗಳನ್ನು ವೀಕ್ಷಣೆ ಮಾಡಿ, ಹೊಸ ಕಟ್ಟಡದಲ್ಲಿ ಮಕ್ಕಳ ತೆರೆದ ತಂಗುದಾಣ ಪ್ರಾರಂಭಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಕೆ.ಚವ್ಹಾಣ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ದೀಪಾಕ್ಷಿ ಜಾನಕಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ರಾಜಶೇಖರ ದೈವಾಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.