ಸಾಂಗವಾಗಿ ನಡೆದ ದೇವಾಲಯದ ಮಹಾ ಸಂಪ್ರೋಕ್ಷಣೆ ಕಾರ್ಯ

ಚಾಮರಾಜನಗರ:ಏ:03: ಯಳಂದೂರು ತಾಲೂಕಿನ ಇತಿಹಾಸ ಪ್ರಸಿದ್ದ ಯಾತ್ರಾ ಸ್ಥಳ ಬಿಳಿಗಿರಿರಂಗನ ಬೆಟ್ಟದ ಬಿಳಿಗಿರಿರಂಗನಾಥಸ್ವಾಮಿ ದೇವಾಲಯದ ಮಹಾ ಸಂಪ್ರೋಕ್ಷಣೆ ಕಾರ್ಯ ಇಂದು ಸಾಂಗವಾಗಿ ನೆರವೇರಿತು. ಅದರಂತೆ ಭಕ್ತರಿಗೆ ದರ್ಶನ ಭಾಗ್ಯ ದೊರೆಯಲಿದೆ.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್, ಶಾಸಕರಾದ ಎನ್. ಮಹೇಶ್, ಆರ್.ನರೇಂದ್ರ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಹಾಗೂ ಇತರೆ ಗಣ್ಯರ ಉಪಸ್ಥಿತಿಯಲ್ಲಿ ನಾನಾ ವಿಶೇಷ ಪೂಜಾ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.
ದೇವತಾ ಪ್ರಾರ್ಥನೆ, ವಿಷ್ಪಕ್ಷೇನಾರಾಧನೆ, ಪುಣ್ಯಾಹವಾಚನ,ಕಳಶಾರಾಧನ, ಇತರೆ ವಿಶೇಷ ಧಾರ್ಮಿಕ ಪೂಜಾ ಕೈಂಕರ್ಯಗಳು, ಮಹಾಮಂ ಗಳಾರತಿ ನಡೆಯಿತು.
ಕಳೆದ ಐದು ದಿನಗಳಿಂದ ದೇವಾಲಯದ ಮಹಾಸಂಪ್ರೋಕ್ಷಣೆ ಕಾರ್ಯದ ಅಂಗವಾಗಿ ಆಗಮಿಕರು, ಅರ್ಚಕರ ವೃಂದದವರು ನಾನಾ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದ್ದಾರೆ.
ಮೈಸೂರಿನ ಯೋಗ ನರಸಿಂಹ ಸ್ವಾಮಿ ದೇವಸ್ಥಾನದ ಡಾ.ಭಾಷ್ಯಂ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಸಕಲ ಪೂಜಾ ಸೇವಾ ಕಾರ್ಯಗಳು ಜರುಗಿದವು.
ಬಳಿಕ ದೇವಾಲಯ ಆವರಣದಲ್ಲಿ ನಡೆದ ಸಮಾರಂಭವನ್ನುದ್ದೇಶಿಸಿ ಮಾತಾನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಅವರು ದೇವಾಲಯದ ಮಹಾಸಂಪ್ರೋಕ್ಷಣಾ ಕಾರ್ಯ ಪೂರ್ಣಗೊಳ್ಳುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಭಕ್ತರಿಗೆ ದೇವಾಲಯದ ದರ್ಶನ ಸಾಧ್ಯವಾಗಿರಲಿಲ್ಲ. ನಾಳೆಯಿಂದಲೇ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಅವಕಾಶವಾಗಲಿದೆ ಎಂದರು.
ಪ್ರವಾಸೋದ್ಯಮ, ಪುರಾತತ್ವ ಇಲಾಖೆ ಹಾಗೂ ಜಿಲ್ಲಾಡಳಿತ ಸೇರಿ ದೇವಾಲಯ ಕಾಮಗಾರಿ ಪೂರ್ಣಗೊಳಿಸಿದೆ. ಹಲವಾರು ದಾನಿಗಳು ಶಕ್ತಿ ಮೀರಿ ಸೇವೆ ಮಾಡಿರುವ ಕಾರಣದಿಂದಲೂ ದೇವಾಲಯದ ಜೀರ್ಣೋದ್ಧಾರ ಕಾರ್ಯ ಯಶಸ್ವಿಯಾಗಿದೆ. ದೇವಾಲಯದ ಕಾರ್ಯಗಳು ಉತ್ತಮವಾಗಿ ನಡೆದಿದೆ.ಉಳಿದಿರುವ ಸಣ್ಣ ಪುಟ್ಟ ಕೆಲಸಗಳು ಶೀಘ್ರವಾಗಿ ಪೂರ್ಣವಾಗಲಿದೆ ಎಂದು ಸಚಿವರು ತಿಳಿಸಿದರು.
ಬಿಳಿರಿರಂಗನಾಥ ಸ್ವಾಮಿ ರಥ ನಿರ್ಮಾಣ ಕಾರ್ಯ ಬೆಂಗಳೂರಿನಲ್ಲಿ ಪೂರ್ಣವಾಗಿದ್ದು ಇದೇ ಏಪ್ರಿಲ್ 10 ರಂದು ಬಿಳಿಗಿರಿರಂಗನಾಥ ಸ್ವಾಮಿಯ ಕ್ಷೇತ್ರಕ್ಕೆ ತರಲಾಗುತ್ತಿದೆ.ಏಪ್ರಿಲ್ 26 ರಂದು ರಥೋತ್ಸವವು ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ನಡೆಯಲಿದೆ ಎಂದು ಉಸ್ತುವಾರಿ ಸಚಿವರು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎನ್.ಮಹೇಶ್ ಅವರು, ಮಹಾಸಂಪ್ರೋಕ್ಷಣೆ ಹಾಗೂ ದೇವಾಲಯದ ಎಲ್ಲ ಕಾರ್ಯಗಳ ಯಶಸ್ಸು ದಾನಿಗಳಿಗೆ ಸಲ್ಲಬೇಕು. ದೇವಾಲಯದ ಅಭಿವೃದ್ಧಿ ಕೆಲಸಗಳಿಗೆ ಶೇ 70 ರಷ್ಟು ಖರ್ಚನ್ನು ದಾನಿಗಳು ವಹಿಸಿಕೊಂಡಿದ್ದಾರೆ. ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಅವರು ಶ್ರಮವಹಿಸಿದ್ದಾರೆ ಎಂದರು.