ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ಮುಂಜಾಗ್ರತೆ

ಕೋಲಾರ,ಏ.೨೦: ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ವಾತಾವರಣದಲ್ಲಿ ಆಗುವ ಬದಲಾವಣೆಗಳಿಂದ ಡೆಂಗ್ಯೂ, ಚಿಕನ್‌ಗುನ್ಯಾ ಮತ್ತು ಮೆದುಳು ಜ್ವರ ನಿಯಂತ್ರಣಕ್ಕಾಗಿ ಮುಂಜಾಗ್ರತಾ ಕ್ರಮಗಳನ್ನು ಆರೋಗ್ಯ ಇಲಾಖೆಯಿಂದ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳನಿಯಂತ್ರಣಾಧಿಕಾರಿಗಳಾದ ಡಾ. ಕಮಲ.ಎಂ ಅವರು ತಿಳಿಸಿದ್ದಾರೆ.
ಡೆಂಗ್ಯೂ ಸಂಶಯಾಸ್ಪದ ಪ್ರಕರಣಗಳ ಕುರಿತು ಸಮುದಾಯಕ್ಕೆ ಅರಿವು ಮೂಡಿಸುವ ಸಲುವಾಗಿ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಪ್ರತಿನಿತ್ಯ ಈಡಿಸ್ ಲಾರ್ವಾ ಸಮೀಕ್ಷೆಯನ್ನು ನಡೆಸುತ್ತಿದ್ದಾರೆ.
ಅಕಾಲಿಕವಾಗಿ ಮಳೆ ಶುರುವಾಗಿರುವ ಹಿನ್ನೆಲೆಯಲ್ಲಿ ವೈರಾಣು ಜ್ವರ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮವಹಿಸಿ ಮನೆಯಲ್ಲಿ ನೀರು ಶೇಖರಣೆಗಳಿಂದ ಕೂಡಿದ ತೊಟ್ಟಿ, ಡ್ರಮ್ ಇನ್ನಿತರೆ ಮತ್ತು ಹೊರಗಡೆ ಘನ ತ್ಯಾಜ್ಯ ವಸ್ತುಗಳಾದ ಟೈರು, ಒರಳುಕಲ್ಲು, ಒಡೆದ ಸೀಸೆ, ತೆಂಗಿನ ಚಿಪ್ಪು, ಹೂವಿನ ಕುಂಡಗಳಲ್ಲಿ ಮಳೆ ನೀರು ಶೇಖರಣೆಯಾಗಿ ಈಡಿಸ್ ಲಾರ್ವಾ ಉತ್ಪತ್ತಿಯಾಗುವ ಸಾಧ್ಯತೆಗಳಿದ್ದು, ಸಾರ್ವಜನಿಕರು ಇದರ ಬಗ್ಗೆ ಎಚ್ಚರ ವಹಿಸಿ ತಮ್ಮ ಮನೆ ಸುತ್ತಮುತ್ತ ಒಳಾಂಗಣ ಮತ್ತು ಹೊರಾಂಗಣದಲ್ಲಿ ನೀರು ಶೇಖರಣೆಯಾಗದಂತೆ ಎಚ್ಚರ ವಹಿಸಬೇಕಾಗಿರುತ್ತದೆ.
ಈಗಾಗಲೇ ಸಾಂಕ್ರಾಮಿಕ ರೋಗಗಳಾದ ಕೋವಿಡ್-೧೯ ಎರಡನೇ ಅಲೆ ಪ್ರಾರಂಭವಾಗಿದ್ದು ಕೋವಿಡ್ ಪ್ರಕರಣಗಳು ಕಂಡು ಬರುತ್ತಿದ್ದು ಜೊತೆಗೆ ಡೆಂಗ್ಯೂ ೩೪ ಪ್ರಕರಣಗಳು ಹಾಗೂ ಚಿಕನ್ ಗುನ್ಯಾ ೬೯ ಪ್ರಕರಣಗಳು ಕಂಡು ಬಂದಿದ್ದು, ಮುಂದೆ ಹೆಚ್ಚಾಗುವ ಸಂಭವ ಇರುತ್ತದೆ. ಆದ್ದರಿಂದ ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದು ಅವರು ತಿಳಿಸಿದ್ದಾರೆ.