ಸಹೋದ್ಯೋಗಿಗಳಿಗೆ ಭಾವನಾತ್ಮಕ ಪತ್ರ ಬರೆದ ಪ್ರವೀಣ್ ಸೂದ್

ಬೆಂಗಳೂರು, ಮೇ೨೩- ಕೇಂದ್ರೀಯ ತನಿಖಾ ಸಂಸ್ಥೆಯ (ಸಿಬಿಐ) ನಿರ್ದೇಶಕರಾಗಿ ಕೇಂದ್ರ ಸೇವೆಗೆ ತೆರಳಿರುವ ಪ್ರವೀಣ್ ಸೂದ್ ಅವರು ರಾಜ್ಯ ಸೇವೆಯಿಂದ ಬಿಡುಗಡೆಗೊಂಡ ವೇಳೆ ಸಹೋದ್ಯೋಗಿಗಳಿಗೆ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ.
ರಾಜ್ಯ ಪೊಲಿಸ್ ಇಲಾಖೆಯ ಮುಖ್ಯಸ್ಥನಾಗಿ ಭಾರವಾದ ಹೃದಯದಿಂದ ಕೇಂದ್ರ ಸೇವೆಗೆ ಹೊರಟಿದ್ದೇನೆ ಮೂರು ವರ್ಷಗಳ ಕಾಲ ಮಾರಿಷನ್ ದೇಶದಲ್ಲಿ ಪೊಲೀಸ್ ಸಲಹೆಗಾರನಾಗಿ ಸೇವೆ ಸಲ್ಲಿಸಿದ್ದರ ಹೊರತಾಗಿ ಇಲಾಖೆಯಲ್ಲಿ ೩೭ ವರ್ಷ ಹಾಗೂ ಇಲಾಖಾ ಮುಖ್ಯಸ್ಥನಾಗಿ ಮೂರೂವರೆ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಇಲಾಖೆಯ ವಿವಿಧ ಹುದ್ದೆಗಳಲ್ಲಿ ವೃತ್ತಿಪರತೆ ಮತ್ತು ಸೇವಾ ಮನೋಭಾವದಿಂದ ನನ್ನನ್ನು ಅರ್ಪಿಸಿಕೊಂಡಿದ್ದೇನೆ’ ಎಂದು ತಿಳಿಸಿದ್ದಾರೆ. ರಾಜ್ಯ ಪೊಲೀಸ್ ಮುಖ್ಯಸ್ಥನಾಗಿ ನಿರ್ಗಮಿಸುತ್ತಿದ್ದರೂ ಮತ್ತೊಂದು ಹುದ್ದೆಯಲ್ಲಿ ಸೇವೆ ಸಲ್ಲಿಸಲು ಸದಾವಕಾಶ ದೊರಕಿದೆ. ಜೀವನ, ರಿಲೇ ಓಟದ ತರಹ ಮತ್ತು ನಾವು ಅಧಿಕಾರವನ್ನು ಮುಂದಿನವರಿಗೆ ಹಸ್ತಾಂತರ ಮಾಡದ ಹೊರತು ಜಯಗಳಿಸಲು ಸಾಧ್ಯವಿಲ್ಲ. ಪೊಲೀಸ್ ಮುಖ್ಯಸ್ಥನಾಗಿ ಒಂದು ಪಡೆಯನ್ನು ಮುನ್ನಡೆಸುವುದು ನಿಜಕ್ಕೂ ಸವಾಲಿನ ವಿಷಯವೇ ಸರಿ. ಆದರೆ, ಕಾನ್ಸ್‌ಟೇಬಲ್‌ನಿಂದ ಹಿಡಿದು ಡಿಜಿ ಹುದ್ದೆವರೆಗಿನ ನನ್ನ ಎಲ್ಲಾ ಸಹೋದ್ಯೋಗಿಗಳು ನೀಡಿದ ಸಹಕಾರದಿಂದ ಈ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಲು ಸಾಧ್ಯವಾಯಿತು. ಉತ್ತುಂಗದಲ್ಲಿ ಒಮ್ಮೊಮ್ಮೆ ಏಕಾಂಗಿಭಾವ ಕಾಡಿದ್ದೂ ಉಂಟು. ಆದರೆ, ಅವು ಕೆಲವೇ ಕ್ಷಣಗಳಾಗಿದ್ದವು’ ಎಂದಿದ್ದಾರೆ.
ಪ್ರತಿಯೊಬ್ಬ ಐಪಿಎಸ್ ಅಧಿಕಾರಿಗೆ ನಾಯಕತ್ವ ಮೂಲಗುಣ ಎಂಬುದು ನೆನಪಿರಬೇಕು. ಐಪಿಎಸ್ ಅಧಿಕಾರಿಗಳು ಇಲಾಖೆಯ ಸುಧಾರಣೆಗಾಗಿ ಯಾವುದೇ ನಿರ್ದಿಷ್ಟಹುದ್ದೆಯನ್ನು ಅಲಂಕರಿಸಲು ಕಾಯಬಾರದು. ಜಿಲ್ಲಾ ವರಿಷ್ಠಾಧಿಕಾರಿ, ಆಯುಕ್ತರು ಅಥವಾ ಮಹಾನಿರ್ದೇಶಕರ ಹುದ್ದೆಯನ್ನೇರಿದರೆ ಮಾತ್ರ ಬದಲಾವಣೆ ಸಾಧ್ಯವೆಂದು ಕಾಯುತ್ತಾ ಕೂರುವುದು ಸಮಂಜಸವಲ್ಲ. ಪೊಲೀಸ್ ಪಡೆಯ ಸುಧಾರಣೆಗೆ ಪ್ರತಿಯೊಂದು ಹುದ್ದೆಯು ನಮಗೆ ಉತ್ತಮ ಅವಕಾಶ ಕಲ್ಪಿಸಿಕೊಡುತ್ತದೆ. ಮಾಧ್ಯಮಗಳು ಕೆಲವೊಂದು ಹುದ್ದೆಗಳನ್ನು ಎಲ್ಲರ ಹುಬ್ಬೇರುವಂತೆ ವರ್ಣರಂಜಿತವಾಗಿ ಬಿಂಬಿಸುತ್ತವೆ.
ಆದರೆ ಇನ್ನುಳಿದ ಹುದ್ದೆಗಳು ಕೇವಲ ಅಧೀನ ಸಿಬ್ಬಂದಿಯ ನಿಶ್ಯಬ್ದ ಹೊಗಳಿಕೆಗೆ ಪಾತ್ರವಾಗುತ್ತವೆ. ನಿಜವಾಗಿ ಅಷ್ಟೇನೂ ಮಹತ್ವವಲ್ಲದ ಹುದ್ದೆಗಳಲ್ಲಿ ವ್ಯವಸ್ಥೆಯ ಬದಲಾವಣೆಗೆ ಉತ್ತಮ ಅವಕಾಶ ಲಭಿಸುತ್ತದೆ. ಮಾಧ್ಯಮದವರು ಇದನ್ನು ಗಮನಿಸಲಾರರು. ಆದರೆ, ವೀಕ್ಷಕನಾಗಿ ಸಾಮಾನ್ಯ ಕಾನ್ಸ್‌ಟೇಬಲ್ ಇದನ್ನು ಗುರುತಿಸಲು ಶಕ್ತನಾಗಿರುತ್ತಾನೆ. ಇವರೇ ಅಧಿಕಾರಿಗಳ ಕಾರ್ಯವೈಖರಿಯ ನಿಜವಾದ ತೀರ್ಪುಗಾರರು’ ಎಂದು ತಮ್ಮ ಸಹೋದ್ಯೋಗಿಗಳಿಗೆ ಸಲಹೆ ನೀಡಿದ್ದಾರೆ. ರಾಜ್ಯಕ್ಕೆ ಕೀರ್ತಿ ತರುವೆ:
ರಾಜ್ಯದ ಜನತೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ನನಗೆ ಹಾಗೂ ನನ್ನ ಕುಟುಂಬಕ್ಕೆ ಅಪಾರ ಪ್ರೀತಿ ತೋರಿದ್ದಾರೆ. ಕರ್ನಾಟಕ ರಾಜ್ಯ ನನ್ನ ಜನ್ಮಭೂಮಿ ಅಲ್ಲದಿದ್ದರೂ ಇದು ನನ್ನ ಕರ್ಮಭೂಮಿ. ಮುಂದೆ ಎರಡು ವರ್ಷಗಳ ನಂತರ ಕನ್ನಡ ನಾಡಿಗೆ ಮರಳು ಬರಲು ನಾನು ಕಾತುರದಿಂದ ಕಾಯುತ್ತಿರುತ್ತೇನೆ. ನನಗೆ ಲಭಿಸಿದ್ದಕ್ಕಿಂತ ಹೆಚ್ಚಿನ ದೈವಾನುಗ್ರಹ ನಿಮಗೆಲ್ಲರಿಗೂ ಲಭಿಸಲಿ’ ಎಂದು ಪ್ರವೀಣ್ ಸೂದ್ ಬರೆದಿರುವ ಸುದೀರ್ಘ ಪತ್ರದಲ್ಲಿ ಸಹೋದ್ಯೋಗಿಗಳಿಗೆ ಶುಭ ಹಾರೈಸಿದ್ದಾರೆ.