ಸಹೋದರರ ಮೇಲೆ ತಲವಾರು ದಾಳಿ

ಓರ್ವ ಮೃತ್ಯು: ಮತ್ತೋರ್ವ ಗಂಭೀರ: ಸಿಪಿಎಂ ಕಾರ್ಯಕರ್ತ ಸೆರೆ?
ಕಾಸರಗೋಡು, ಎ.೭- ಚುನಾವಣೆ ಮುಗಿದ ಬಳಿಕ ನಿನ್ನೆ ರಾತ್ರಿ ಕಣ್ಣೂರಿನಲ್ಲಿ ನಡೆದ ಘರ್ಷಣೆಯಲ್ಲಿ ಗಂಭೀರ ರೀತಿಯಲ್ಲಿ ಗಾಯಗೊಂಡಿದ್ದ ಮುಸ್ಲಿಂ ಯೂತ್ ಲೀಗ್ ಕಾರ್ಯಕರ್ತನೋರ್ವ ಚಿಕಿತ್ಸೆಗೆ ಸ್ಪಂದಿಸದೆ ಇಂದು (ಬುಧವಾರ) ಮುಂಜಾನೆ ಮೃತಪಟ್ಟಿದ್ದಾರೆ. ಕೃತ್ಯಕ್ಕೆ ಸಂಬಂಧಿಸಿದಂತೆ ಓರ್ವ ಸಿಪಿಎಂ ಕಾರ್ಯಕರ್ತನನ್ನು ಕೂತು ಪರಂಬ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕೂತುಪರಂಬ ಪುಳ್ಳಕರೆಯ ಮನ್ಸೂರ್ (೨೨) ಕೊಲೆಯಾದವರು. ಅವರ ಸಹೋದರ ಮೊಹ್ಸಿನ್ (೨೭) ಗಂಭೀರ ಗಾಯಗೊಂಡಿದ್ದಾರೆ. ನಿನ್ನೆ ರಾತ್ರಿ ೮:೩೦ರ ಸುಮಾರಿಗೆ ತಂಡವೊಂದು ಮನೆಗೆ ಕಚ್ಚಾ ಬಾಂಬ್ ಎಸೆದು, ಬಳಿಕ ಮನೆಯೊಳಗೆ ನುಗ್ಗಿ ಸಹೋದರರಿಬ್ಬರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಇದರಿಂದ ಗಂಭೀರ ಗಾಯಗೊಂಡ ಮನ್ಸೂರ್ ಹಾಗೂ ಮೊಹ್ಸಿನ್ ಅವರನ್ನು ಕೋಝಿಕ್ಕೋಡ್ ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಮನ್ಸೂರ್ ಕೊನೆಯುಸಿರೆಳೆದಿದ್ದಾರೆ. ನಿನ್ನೆ ಮಧ್ಯಾಹ್ನ ಮತಗಟ್ಟೆ ಬಳಿ ಯೂತ್ ಲೀಗ್ ಹಾಗೂ ಸಿಪಿಎಂ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿತ್ತು. ಮನ್ಸೂರ್ ರ ಸಹೋದರ ಮೊಹ್ಸಿನ್ ಮತಗಟ್ಟೆ ಯುಡಿ ಎಫ್ ಏಜಂಟ್ ಆಗಿದ್ದರು. ಚುನಾವಣೆ ಮುಗಿದು ಮನೆಗೆ ತೆರಳುತ್ತಿದ್ದಾಗ ಮೊಹ್ಸಿನ್ ರಿಗೆ ತಂಡವೊಂದು ಬೆದರಿಕೆ ಒಡ್ಡಿತ್ತು ಎನ್ನಲಾಗಿದೆ. ರಾತ್ರಿ ಮನೆಗೆ ನುಗ್ಗಿದ ತಂಡವು ಇಬ್ಬರ ಮೇಲೆ ಏಕಾಏಕಿ ಮಾರಣಾಂತಿಕ ದಾಳಿ ನಡೆಸಿ ಬಳಿಕ ಪರಾರಿಯಾಗಿದೆ. ಕೃತ್ಯವನ್ನು ಖಂಡಿಸಿ ಕೂತುಪರಂಬ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಂದು ಹರತಾಳಕ್ಕೆ ಯುಡಿಎಫ್ ಕರೆ ನೀಡಿದೆ.