ಸಹಿ ಸಂಗ್ರಹ ಬಿಜೆಪಿ ಪದ್ಧತಿಯಲ್ಲ – ಕಾಂಗ್ರೆಸ್ ದ್ವಂದ್ವ ನೀತಿ ಬಿಡಲಿ

ರಾಯಚೂರು.ಜೂ.೦೮- ಮುಖ್ಯಮಂತ್ರಿ ಪರ ವಿರೋಧ ಸಹಿ ಸಂಗ್ರಹ ಬಿಜೆಪಿಯ ಪದ್ಧತಿಯಲ್ಲ. ಯಾರು ಸಹ ಈ ರೀತಿ ಸಹಿ ಸಂಗ್ರಹ ಮಾಡಕೂಡದು ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.
ಅವರಿಂದು ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನೆ ಪೂರ್ವ ಸುದ್ದಿಗಾರರೊಂದಿಗೆ ಮಾತನಾಡಿದರು. ಸಹಿ ಸಂಗ್ರಹ ಬಿಜೆಪಿಯ ಪದ್ಧತಿಯಲ್ಲ. ಈ ಹಿಂದೆ ಎಂದೂ ಸಹ ಈ ರೀತಿಯ ಸಹಿ ಸಂಗ್ರಹ ನಾವು ನೋಡಿಲ್ಲ. ಆದಕಾರಣ ಯಾರು ಸಹಿ ಸಂಗ್ರಹಕ್ಕೆ ಮುಂದಾಗಬಾರದು ಮತ್ತು ಸಹಿ ಸಂಗ್ರಹ ಮಾಡಬಾರದೆಂದು ಹೇಳಿದ್ದಾರೆ. ಬಿಜೆಪಿ ಶಿಸ್ತಿನ ಪಕ್ಷವಾಗಿದೆ. ಯಡಿಯೂರಪ್ಪ ಅವರು ಶಿಸ್ತಿನ ನಾಯಕರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುತಂತ್ರ ಮಾಡುವುದನ್ನು ನಿಲ್ಲಿಸಬೇಕು.
ಬಿಜೆಪಿ ಪಕ್ಷದಲ್ಲಿ ಯಡಿಯೂರಪ್ಪ ಬಿಟ್ಟರೇ ಬೇರೇ ಮುಖ್ಯಮಂತ್ರಿ ನಾಯಕರಿಲ್ಲ. ಯಡಿಯೂರಪ್ಪ ಅವರು ಗಟ್ಟಿಯಾಗಿದ್ದಾರೆಂದು ಪ್ರತಿಪಾದಿಸಿದ ಅವರು, ಈ ಹಿಂದೆ ಇದೇ ಡಿ.ಕೆ.ಶಿವಕುಮಾರ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ರಾಜೀನಾಮೆ ಕೇಳಿದರು. ಯಡಿಯೂರಪ್ಪ ಅವರು ಕೇಂದ್ರ ನಾಯಕರು ಹೇಳಿದರೇ ರಾಜೀನಾಮೆಗೆ ಸಿದ್ಧ ಎಂದು ಹೇಳುತ್ತಿದ್ದಂತೆ ಈಗ ಕಾಂಗ್ರೆಸ್ಸಿನವರ ಹೇಳಿಕೆಯೇ ಬದಲಾಗಿದೆ. ಈ ಡಬಲ್ ಗೇಮ್ ಬಿಟ್ಟು ಬಿಡಬೇಕು. ನಮ್ಮಲ್ಲಿ ಬಿಜೆಪಿ ಮುಖ್ಯಮಂತ್ರಿಯಾಗುವ ಸಮರ್ಥ ನಾಯಕರು ಅನೇಕರಿದ್ದಾರೆ. ಆದರೆ, ಹೈಕಮಾಂಡ್‌ನ ನಿರ್ಧಾರವೇ ಅಂತಿಮವಾಗಿರುತ್ತದೆ.
ಕಾಂಗ್ರೆಸ್ಸಿನವರ ಈ ಆಟ ಬಿಜೆಪಿ ಪಕ್ಷದ ಮುಂದೆ ನಡೆಯುವುದಿಲ್ಲವೆಂದು ಟಾಂಗ್ ನೀಡಿದ ಅವರು, ಸ್ವತಃ ಯಡಿಯೂರಪ್ಪನವರೇ ಡಿ.ಕೆ.ಶಿವಕುಮಾರ ಮತ್ತು ಸಿದ್ದರಾಮಯ್ಯನವರಿಗೆ ಉತ್ತರ ಕೊಟ್ಟಿದ್ದಾರೆ. ಇಡೀ ರಾಜ್ಯದ ಕಾರ್ಯಕರ್ತರಿಗೆ ಬಿ.ಎಸ್.ವೈ.ಹೇಳಿಕೆ ತೃಪ್ತಿ ತಂದಿದೆ. ೧೮ ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ನೀಡುವ ಪ್ರಧಾನಿ ಮೋದಿ ಅವರ ಹೇಳಿಕೆ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕ ಡಾ.ಶಿವರಾಜ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.