’ಸಹಿ ಸಂಗ್ರಹ, ಖಾತೆ ಬದಲಾವಣೆ ಮುಗಿದ ಕಥೆ’ : ಸಚಿವ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ, ಏ. ೪- ’ತಮ್ಮ ವಿರುದ್ದದ ಸಹಿ ಸಂಗ್ರಹ, ಖಾತೆ ಬದಲಾವಣೆ, ರಾಜೀನಾಮೆ ನೀಡುವುದು ಎಲ್ಲ ಮುಗಿದ ಕಥೆ. ಕಳೆದ ಕೆಲ ದಿನಗಳ ಹಿಂದೆ ಈ ಎಲ್ಲ ವಿಷಯಗಳು ಚರ್ಚೆಯಾದವು. ಯಾರ್‍ಯಾರೋ ಈ ಕೆಲಸ ಮಾಡಲು ಹೊರಟಿದ್ದರು’ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ’ಆದರೆ ತಾವು ಇವ್ಯಾವುದಕ್ಕೂ ಜಗ್ಗಲ್ಲ – ಬಗ್ಗಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ಇದರಿಂದ ಎಲ್ಲರೂ ಮೌನವಾಗಿದ್ದಾರೆ. ಈ ಬಗ್ಗೆ ತಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ ನೀವು (ಪತ್ರಕರ್ತರು) ಬಿಡುತ್ತಿಲ್ಲ. ಹಾಗಾಗಿ ಹೇಳುತ್ತಿದ್ದೇನೆ’ ಎಂದು ಹೇಳಿದರು.
ಹುಳುಕು ಸಿಗುವುದಿಲ್ಲ:
ಸಣ್ಣಪುಟ್ಟ ಆಡಳಿತಾತ್ಮಕ ವ್ಯತ್ಯಾಸಗಳಾಗಿದ್ದು, ಸರಿಪಡಿಸಿಕೊಳ್ಳುತ್ತಿದ್ದೇವೆ. ಆದರೆ ಇದರಲ್ಲಿ ವಿಪಕ್ಷಗಳು ಹುಳುಕು ಹುಡುಕಲು ಹೊರಟಿವೆ. ಇದನ್ನೇ ಮುಂದಿಟ್ಟುಕೊಂಡು ಇಲ್ಲಸಲ್ಲದ ಆರೋಪ ಮಾಡುತ್ತಿವೆ. ಇವರಿಗೆ ಯಾವುದೇ ಹುಳುಕುಗಳು ಸಿಗುವುದಿಲ್ಲ ಎಂದರು.
ತಮ್ಮ ಇಲಾಖೆಯಲ್ಲಿ ಕಂಡುಬಂದ ಲೋಪದೋಷಗಳನ್ನು ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ. ಅದರಂತೆ ಸಿಎಂ ಹಾಗೂ ಪಕ್ಷದ ರಾಜ್ಯಧ್ಯಕ್ಷರಿಗೂ ತಿಳಿಸಿದ್ದೇನೆ. ಆದಷ್ಟು ಶೀಘ್ರ ರಾಜ್ಯಾಧ್ಯಕ್ಷರು ಸಮಸ್ಯೆ ಪರಿಹರಿಸಲಿದ್ದಾರೆ ಎಂದು ಹೇಳಿದರು.
ಪ್ರಖರ ಹಿಂದುತ್ವವಾದಿ:
ಮೇ. ೨ರ ನಂತರ ರಾಜ್ಯದ ರಾಜಕೀಯದಲ್ಲಿ ಮತ್ತೊಂದು ಬಿರುಗಾಳಿ ಏಳಲಿದೆ ಎಂಬ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ’ನೀವು (ಪತ್ರಕರ್ತರು) ಯತ್ನಾಳ್ ನೀಡುವ ಹೊಸ ಡೇಟ್ ತೆಗೆದುಕೊಳ್ಳುತ್ತೀರಿ’ ಎಂದು ಹಾಸ್ಯವಾಗಿ ಹೇಳಿದರು.
ಈಗಾಗಲೇ ಯತ್ನಾಳ್‌ಗೆ ಯಾವ ರೀತಿಯಲ್ಲಿ ಹೇಳಬೇಕೋ ಹಾಗೆ ಹೇಳಲಾಗಿದೆ. ಆದರೆ ಏಕೆ ಹೀಗೆ ಹೇಳಿಕೆ ನೀಡುತ್ತಿದ್ದಾರೋ ಗೊತ್ತಿಲ್ಲ. ಹೈಕಮಾಂಡ್ ಸಹ ನೋಟೀಸ್ ನೀಡಿದೆ. ಹೈಕಮಾಂಡ್ ಇದನ್ನು ಬಗೆಹರಿಸಬೇಕು ಎಂದು ಹೇಳಿದರು.
ಆದರೆ ಯತ್ನಾಳ್ ಪ್ರಖರ ಹಿಂದುತ್ವವಾದಿ. ಅನೇಕ ಹಿಂದುತ್ವವಾದಿಗಳ ಮಧ್ಯೆ ಯತ್ನಾಳ್‌ರವರು ಒಳ್ಳೆಯ ಹಿಂದುತ್ವ ಹೋರಾಟಗಾರ. ಅವರೊಂದು ಗೋ ಶಾಲೆ ತೆರೆದಿದ್ದಾರೆ. ನಾನೂ ಕೂಡ ಅಲ್ಲಿಗೆ ಭೇಟಿ ನೀಡಿದ್ದೇನೆ. ನೂರಾರು ಗೋವುಗಳಿವೆ’ ಎಂದು ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.