ಸಹಿ ನಕಲು ನೌಕರನ ವಿರುದ್ಧ ಕ್ರಮಕ್ಕೆ ಆಗ್ರಹ

ಬೆಂಗಳೂರು, ಮಾ.೨೫-ಲೆಕ್ಕ ಅಧೀಕ್ಷಕರ ಸಹಿ ನಕಲು ಸೇರಿದಂತೆ ಇನ್ನಿತರ ಹಗರಣಗಳ ಆರೋಪ ಹೊತ್ತಿರುವ ಇಲ್ಲಿನ ಗಾಂಧಿನಗರ ವಿಧಾನಸಭಾ ಕ್ಷೇತ್ರದ ೧೨೦ನೆ ವಾರ್ಡಿನ ಎಸ್ ಡಿಸಿ ಚಿಕ್ಕ ಹೊನ್ನಯ್ಯ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್. ರಮೇಶ್ ಆಗ್ರಹಿಸಿದರು.
ನಗರದಲ್ಲಿಂದು ಈ ಕುರಿತು ಬಿಬಿಎಂಪಿ ಆಡಳಿತಾಧಿಕಾರಿ ಹಾಗೂ ಆಯುಕ್ತರಿಗೆ ದೂರು ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಗಾಂಧಿನಗರ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ ೧೨೦ ರಲ್ಲಿ ಮಾಡದೇ ಇರುವ ೧ ಕೋಟಿ ಮೊತ್ತದ ಕಾಮಗಾರಿಗೆ ಎಸ್ ಡಿಸಿ ಚಿಕ್ಕ ಹೊನ್ನಯ್ಯ ನಕಲಿ ಬಿಲ್ ಸೃಷ್ಟಿಸಿದ್ದಾರೆ.
ಅಷ್ಟೇ ಅಲ್ಲದೆ, ಲೆಕ್ಕ ಅಧೀಕ್ಷಕರ ಸಹಿಯನ್ನು ತಾನೇ ಮಾಡಿರುವುದಲ್ಲದೇ, ಇದೇ ವಾರ್ಡಿನ ಎಇ ಬದಲಾಗಿ ಪಕ್ಕದ ವಾರ್ಡಿನ ಎಇ ಅವರಿಂದ ಬಿಆರ್ ಪುಸ್ತಕಕ್ಕೆ ಸಹಿ ಮಾಡಿಸಿ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಿಸಿರುವ ಭಾರೀ ವಂಚನೆ ಮಾಡಿದ್ದಾರೆ ಎಂದು ಆರೋಪ ಮಾಡಿದರು.
ಅಲ್ಲದೆ, ತನಗೆ ಮೂರ್ನಾಲ್ಕು ಬಾರಿ ಮುಂಬಡ್ತಿ ನೀಡಲಾಗಿದ್ದರೂ ಸಹ ಚಿಕ್ಕ ಹೊನ್ನಯ್ಯ ಅದನ್ನು ನಿರಾಕರಿಸಿ ದ್ವಿತೀಯ ದರ್ಜೆ ಗುಮಾಸ್ತನಾಗಿಯೇ ೧೫ ವರ್ಷಗಳಿಂದಲೂ ಅದೇ ಕಚೇರಿಯಲ್ಲಿಯೇ ಮುಂದುವರೆಯುತ್ತಿದ್ದಾನೆ. ಹಲವಾರು ಹಗರಣಗಳ ಪ್ರಮುಖ ಆರೋಪಿಯಾಗಿರುವ ವಂಚಕ ಗುತ್ತಿಗೆದಾರರೊಂದಿಗೆ ಸೇರಿ ಈ ವಂಚನೆ ಎಸೆಗಿದ್ದಾನೆ.
ತನ್ನ ಸಹಿಯನ್ನು ಬೇರೆಯವರು ಮಾಡಿ ಹಣ ಬಿಡುಗಡೆ ಮಾಡಿಸಲಾಗಿದೆ ಎಂದು ಖುದ್ದು ಉಮೇಶ್ ಎಂಬಾತ ಗಾಂಧಿನಗರ ವಿಭಾಗದ ಕಚೇರಿಯ ಲೆಕ್ಕ ಅಧೀಕ್ಷಕರು ಮಾ.೧೨ರಂದು ಪಶ್ಚಿಮ ವಲಯದ ಜಂಟಿ ಆಯುಕ್ತರಿಗೆ ದೂರುಗಳನ್ನೂ ಸಹ ನೀಡಿರುತ್ತಾರೆ.
ಆದುದರಿಂದ, ಚಿಕ್ಕ ಹೊನ್ನಯ್ಯನನ್ನು ಸೇವೆಯಿಂದ ಅಮಾನತು ಮಾಡುವುದರ ಜೊತೆಗೆ ಮಾಡದೇ ಇರುವ ಕಾಮಗಾರಿಗೆ ಹಣ ಬಿಡುಗಡೆ ಮಾಡಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಹಾಗೂ ಕೆಆರ್ ಐಡಿಎಲ್ ಸಂಸ್ಥೆಗೆ
ಪಾವತಿಯಾಗಿರುವ ತೊಂಬತ್ತಾರು ಲಕ್ಷದ ಎಂಬತ್ತಮೂರು ಸಾವಿರದ ಮುನ್ನೂರ ಎಪ್ಪತ್ತೊಂಬತ್ತುಗಳನ್ನು ಆ ಸಂಸ್ಥೆಯಿಂದ ವಾಪಸ್ಸು ಪಡೆಯುವ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ರಮೇಶ್ ಒತ್ತಾಯಿಸಿದರು.

ಅಮಾನತು..!
ಗಾಂಧಿನಗರ ವಿಭಾಗದ ಕಾರ್ಯಪಾಲಕ ಅಭಿಯಂತರರ ಕಛೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿರುವ ಚಿಕ್ಕ ಹೊನ್ನಯ್ಯ ಅವರ ಅಮಾನತಿಗೆ ಪಾಲಿಕೆಯ ಆಯುಕ್ತರು ಆದೇಶಿಸಿದ್ದಾರೆ ಎಂದು ವರದಿಯಾಗಿದೆ.