ಸಹಾಯ, ಸಹಕಾರ ಇದ್ದಾಗ ಮಾತ್ರ ಸಮಸ್ಯೆಗೆ ಪರಿಹಾರ ಸಾಧ್ಯ: ಮಾರುತಿ ಪ್ರಸಾದ್


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.11: ಎಲ್ಲರ ಸಹಾಯ ಸಹಕಾರ ಇದ್ದಾಗ ಮಾತ್ರ ಯಾವುದೇ ಸಮಸ್ಯೆಗೆ ಪರಿಹಾರ ಮತ್ತು ಅಭಿವೃದ್ಧಿ ಸಾಧ್ಯ ಎಂದು ಬುಡಾ ನೂತನ ಅಧ್ಯಕ್ಷ ಎಸ್.ಮಾರುತಿ ಪ್ರಸಾದ್ ಅಭಿಪ್ರಾಯಪಟ್ಟರು.
ಅವರು ನಿನ್ನೆ ಬಳ್ಳಾರಿ ಶಾಮಿಯಾನ ಸಪ್ಲೈಯರ್ಸ್ ಅಸೋಸಿಯೇಷನ್ ನಿಂದ ಕ್ಲಾಸಿಕ್ ಫಂಕ್ಷನ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.
ಕಳೆದ 23 ವರ್ಷಗಳ ಹಿಂದೆ ಆರಂಭಿಸಿದ ಗಣೇಶ ಹಬ್ಬದ ಆಚರಣೆಯಲ್ಲಿ ಸಮಾಜ ಸೇವೆಯ ಕಾರ್ಯವನ್ನು ಆರಂಭಿಸಿದೆ. ಇತರರನ್ನು ಒಳಗೊಂಡು ಒಗ್ಗಟ್ಟು, ಸಂಘಟನಾ ಶಕ್ತಿ ಆರಂಭವಾಯಿತು. ಅಲ್ಲಿಂದ ರಾಜಕೀಯವಾಗಿ 15 ವರ್ಷಗಳಿಂದ ನಿರಂತರವಾಗಿ ಸೇವೆ ಮಾಡುತ್ತಾ ಬಂದಿರುವೆ. ಯಾವುದೇ ಸಮಸ್ಯೆ ಇರಲಿ ಅದನ್ನು ಬಗೆಹರಿಸುತ್ತೇನೆ ಅದಕ್ಕೆ ತಮ್ಮೆಲ್ಲರ ಆಶೀರ್ವಾದ ಇರಲಿ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆರ್ಯವೈಶ್ಯ ಅಸೋಸಿಯೇಷನ್ ಅಧ್ಯಕ್ಷ ಡಾ.ಡಿ.ಎಲ್. ರಮೇಶ್ ಗೋಪಾಲ್ ಅವರು, ಮಾರುತಿ ಪ್ರಸಾದ್ ಬುಡಾ ಅಧ್ಯಕ್ಷ ಹುದ್ದೆಯನ್ನು ಬೇಡಿ ಬಂದವರಲ್ಲ. ಕಳೆದ ಹತ್ತು ವರ್ಷಗಳಿಂದ ಬಿಜೆಪಿ ಪಕ್ಷಕ್ಕಾಗಿ, ಸಮಾಜಕ್ಕಾಗಿ ಅವಿರತವಾಗಿ ಸೇವೆಯನ್ನು ಮಾಡಿದ್ದಾರೆ. ಆ ಸೇವೆಯೇ ಅವರಿಗೆ ಬೂಡಾ ಅಧ್ಯಕ್ಷ ಹುದ್ದೆ ಅಲಂಕರಿಸುವಂತೆ ಮಾಡಿದೆ. ಆರ್ಯವೈಶ್ಯ ಸಂಘದ ಯುವಕರು ಹೆಚ್ಚು ಹೆಚ್ಚು ರಾಜಕೀಯವಾಗಿ ಮುಂದೆ ಬರಬೇಕು ಎಂದರು.
ಕಳೆದ ಎರಡು ವರ್ಷದ ಅವಧಿಯಲ್ಲಿ ಅಸೋಸಿಯೇಷನ್ ನಿಂದ ಮಕ್ಕಳಿಗೆ ಉಚಿತ ಪುಸ್ತಕ, ಬಟ್ಟೆ, ನೀರು ಆಹಾರ ಕಿಟ್ಟುಗಳನ್ನು ವಿತರಿಸಲಾಗಿದೆ ಈ ಸೇವೆ ನಿರಂತರವಾಗಿ ಮುಂದುವರೆಯಲಿದೆಂದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಬಳ್ಳಾರಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ನ ಕಾರ್ಯದರ್ಶಿ ಎನ್. ಯಶವಂತರಾಜ್ ಅವರು, ಬೂಡ ಅಧ್ಯಕ್ಷ ಸ್ಥಾನ ಶಾಶ್ವತವಲ್ಲ. ನಿಮ್ಮ ಆಡಳಿತ ಅವಧಿಯಲ್ಲಿ ಬಳ್ಳಾರಿ ನಗರ ಎಷ್ಟು ಅಭಿವೃದ್ಧಿ ಹೊಂದಿತು ಎಂಬುದು ಶಾಶ್ವತ ಆಗಲಿದೆ ಆ ಕೆಲಸ ನಿಮ್ಮಿಂದಾಗಲಿ ಎಂದರು.
ಇದೇ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಲಕ್ಷ್ಮಿ ರವರಿಗೆ ಅಸೋಸಿಯೇಷನ್ ನಿಂದ ಸನ್ಮಾನಿಸಲಾಯಿತು
ಕಾರ್ಯಕ್ರಮದಲ್ಲಿ ಆದಿಶೇಷ, ಚಂಚಯ್ಯ, ತಿಪ್ಪೇಸ್ವಾಮಿ, ಸುಬ್ಬರಾವ್, ದಾದಂ ಗೋಪಾಲಕೃಷ್ಣ, ಸೊಂತ ಗಿರಿದರ್, ಇಬ್ರಾಹಿಂ ಬಾಬು, ಬಿಲ್ವಾ ರಾಜೇಶ್, ವೆಂಕಟೇಶ್, ಶ್ರೀರಾಮುಲು, ಸುಬ್ಬರಾವ್, ಮಧುಸೂದನ್ ರೆಡ್ಡಿ ಹಾಗೂ ಸಮಾಜದ ಗಣ್ಯರು ಭಾಗವಹಿಸಿದ್ದರು