ಸಹಾಯವಾಣಿ ಕೇಂದ್ರ ವೀಕ್ಷಿಸಿದ ಜಿಲ್ಲಾಧಿಕಾರಿ

ಗದಗ, ಮೇ 15: ಜಿಲ್ಲೆಯಲ್ಲಿನ ಕೋವಿಡ್ ಸೋಂಕಿತರ ಚಿಕಿತ್ಸೆ ಹಾಗೂ ಆಕ್ಸಿಜನ್, ಚುಚ್ಚುಮದ್ದು ಸರಬರಾಜು, ಲಸಿಕೆ ಮಾಹಿತಿ, ಕುಂದುಕೊರತೆಗಳ ನಿವಾರಣೆ, ಮಾಹಿತಿಗಾಗಿ ಆರಂಭಿಸಲಾದ ಸಹಾಯವಾಣಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರು ಭೇಟಿ ನೀಡುವ ಮೂಲಕ ಸಹಾಯವಾಣಿ ಕೇಂದ್ರದ ಕಾರ್ಯ ಚಟುವಟಿಕೆಗಳನ್ನು ವೀಕ್ಷಿಸಿದರು.

ಜಿಲ್ಲೆಯಲ್ಲಿ ಕರೋನಾ ಸೊಂಕಿತರ ಪ್ರಕರಣಗಳು ಹೆಚ್ಚುತ್ತಿದ್ದು ಕರೋನಾ ವೈರಸ್ ಕುರಿತಂತೆ ಸಾರ್ವಜನಿಕರ ಕುಂದು ಕೊರತೆಗಳ ನಿವಾರಣೆ ಹಾಗೂ ಮಾಹಿತಿಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾಲಯದ ಸಹಯೋಗದೊಂದಿಗೆ ವಿವಿ ಆವರಣದಲ್ಲಿ ಸಹಾಯವಾಣಿ ಕೇಂದ್ರ ಕಾರ್ಯಾರಂಭ ಮಾಡಲಾಗಿದೆ. ಈ ಸಹಾಯವಾಣಿ ನಿರಂತರವಾಗಿ ಕಾರ್ಯನಿರ್ವಹಿಸಲು ಸಿಬ್ಬಂದಿ ನಿಯೋಜಿಸಲಾಗಿದೆ ಎಂದರು.

ಸಹಾಯವಾಣಿ ಕೇಂದ್ರಕ್ಕೆ ಡಿಸಿಎಫ್ ಸೂರ್ಯಸೆನ್ ಅವರನ್ನು ನೋಡಲ್ ಅಧಿಕಾರಿಯಾಗಿ ನಿಯೋಜಿಸಿದ್ದು, ಅವರು ಕೇಂದ್ರದ ಕಾರ್ಯ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಿದ್ದಾರೆ. ಜೊತೆಗೆ ಡಿಡಿಎಲ್‍ಆರ್ ರವಿಕುಮಾರ ಅವರು ಸಹ ಸಮನ್ವಯ ಕಾರ್ಯಕ್ಕೆ ನೇಮಿಸಿದೆ ಎಂದು ಹೇಳಿದರು.

ಪ್ರಸ್ತುತ ದಿನಗಳಲ್ಲಿ ಕರೋನಾ ವೈರಾಣು ಸೊಂಕಿತರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಸಮಸ್ಯೆಗಳ ಸ್ಪಂದನೆ ಮತ್ತು ತುರ್ತು ಪರಿಹಾರಕ್ಕಾಗಿ ಸಾರ್ವಜನಿಕ ಹಿತದೃಷ್ಠಿಯಿಂದ ಸಹಾಯವಾಣಿ ಕಾರ್ಯನಿರ್ವಹಿಸಲಿದೆ. ಸಹಾಯವಾಣಿ ಸಂಖ್ಯೆ 08372-238182 ಆಗಿದ್ದು ಕೋವಿಡ್ -19 ಗೆ ಸಂಭಂದಿಸಿದ ಮಾಹಿತಿ ಹಾಗೂ ಲಸಿಕಾಕರಣ ವಿವರವನ್ನು ಸಹಾಯವಾಣಿಯಿಂದ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಜಿಲ್ಲೆಯ ಜಿಮ್ಸ್, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್ ಮಾಹಿತಿ, ಆಂಬುಲೆನ್ಸ್ ಸೇವೆ, ಲಸಿಕೆ ವಿವರ, ಹೋಮ್ ಕ್ವಾರಂಟೆನ್, ಸೋಂಕಿತರ ಪ್ರಾಥಮಿಕ ದ್ವಿತೀಯ ಸೋಂಕಿತರ ಪತ್ಯೆ ಕಾರ್ಯ ಹೀಗೆ ಎಲ್ಲ ಮಾಹಿತಿಯನ್ನು ಸಂಗ್ರಹಿಸಬೇಕು. ಸರ್ವಜನಿಕರಿಗೂ ಈ ಸಹಾಯವಾಣಿ ಕೇಂದ್ರದಿಂದ ಮಾಹಿತಿ ದೊರೆತು ಸೋಂಕಿತರಿಗೆ ಚಿಕಿತ್ಸೆಗೆ ಸಹಕಾರಿಯಾಗಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಡಿಸಿಎಫ್ ಸೂರ್ಯಸೆನ್, ಡಿಡಿಎಲ್‍ಆರ್ ರವಿಕುಮಾರ್ ಸೇರಿದಂತೆ ಸಹಾಯವಾಣಿ ಕೇಂದ್ರದ ನಿಯೋಜಿತ ಸಿಬ್ಬಂದಿಗಳು ಹಾಗೂ ವಿವಿ ಸಿಬ್ಬಂದಿಗಳು ಹಾಜರಿದ್ದರು.