ಸಹಾಯಧನ ಪಡೆಯಲು ಚವ್ಹಾಣ್ ಮನವಿ

ಬೀದರ:ಮೇ.29: ಲಾಕ್‍ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಕಾರ್ಮಿಕರು, ಹೂವು, ಹಣ್ಣು ಮತ್ತು ತರಕಾರಿ ಬೆಳೆಗಾರರು, ಕಲಾವಿದರು, ಆಟೊ, ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ಚಾಲಕರಿಗೆ ರಾಜ್ಯ ಸರ್ಕಾರ ಆರ್ಥಿಕ ನೆರವನ್ನು ಘೋಷಿಸಿದೆ. ಸಂಬಂಧಪಟ್ಟವರು ಇದರ ಸದುಪಯೋಗ ಪಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ತಿಳಿಸಿದ್ದಾರೆ.

ಕಟ್ಟಡ ಕಾರ್ಮಿಕರಿಗೆ ತಲಾ ₹3 ಸಾವಿರ ಸಹಾಯಧನ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 1,43,843 ಜನ ಕಟ್ಟಡ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದಾರೆ. ₹ 43 ಕೋಟಿಗಿಂತ ಹೆಚ್ಚು ಸಹಾಯಧನ ಜಿಲ್ಲೆಗೆ ಬರುವ ನಿರೀಕ್ಷೆಯಿದೆ. ಅದರಂತೆ ಅಸಂಘಟಿತ ಕಾರ್ಮಿಕರಾದ ಕ್ಷೌರಿಕರು, ಅಗಸರು, ಟೇಲರ್‌, ಹಮಾಲಿಗಳು, ಚಿಂದಿ ಆಯುವವರು, ಕುಂಬಾರರು, ಭಟ್ಟಿ ಕಾರ್ಮಿಕರು, ಅಕ್ಕಸಾಲಿಗರು, ಮೆಕ್ಯಾನಿಕ್‍ಗಳು, ಕಮ್ಮಾರರು, ಗೃಹ ಕಾರ್ಮಿಕರು, ಅಕ್ಕಸಾಲಿಗರು ಹಾಗೂ ಚಮ್ಮಾರರಿಗೆ ತಲಾ ₹ 2 ಸಾವಿರ ಸಹಾಯಧನ ದೊರೆಯಲಿದೆ.ಇದರಿಂದ 1,203 ಜನರಿಗೆ ಲಾಭವಾಗಲಿದೆ ಎಂದು ಹೇಳಿದ್ದಾರೆ.
ಬೀದಿ ಬದಿಯ ವ್ಯಾಪಾರಿಗಳಿಗೆ ತಲಾ ₹ 2 ಸಾವಿರ ಸಹಾಯದನ ನೀಡಲಾಗುತ್ತಿದೆ. ಹೂವು, ಹಣ್ಣು ಮತ್ತು ತರಕಾರಿ ಬೆಳೆಗಾರರಿಗೂ ಸರ್ಕಾರ ಸಹಾಯಧನ ನೀಡುತ್ತಿದೆ. ಜಿಲ್ಲೆಯ 2,271 ರೈತರಿಗೆ ಸುಮಾರು ₹ 2 ಕೋಟಿ ಸಹಾಯಧನ ಸಿಗುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.

ಜಿಲ್ಲೆಯ ಕಲಾವಿದರ ಒಕ್ಕೂಟವು ತಮ್ಮನ್ನು ಭೇಟಿಯಾಗಿ, ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ತಮಗೂ ಸರ್ಕಾರದಿಂದ ಆರ್ಥಿಕ ಸಹಾಯಧನ ಕಲ್ಪಿಸಬೇಕೆಂದು ಮನವಿ ಮಾಡಿತ್ತು. ಈ ಕುರಿತಂತೆ ಮುಖ್ಯಮಂತ್ರಿಯವರಿಗೆ ಮನವರಿಕೆ ಮಾಡಿದ್ದೆ. ಅದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕಲಾವಿದರ ನೆರವಿಗೂ ಮುಂದಾಗಿರುವುದು ಸಂತೋಷ ತಂದಿದೆ ಎಂದು ಹೇಳಿದ್ದಾರೆ.

ಕಲಾವಿದರು, ಕಲಾ ತಂಡಗಳಿಗೆ ತಲಾ ₹ 3 ಸಾವಿರ. ಆಟೊ, ಟ್ಯಾಕ್ಸಿ ಹಾಗೂ ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ತಲಾ ₹ 3 ಸಾವಿರ ಸಹಾಯಧನ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.