ಸಹಾಯಕ ಇಂಜಿನಿಯರ್‌ಗೆ ಬೀಳ್ಕೊಡುಗೆ

ದೇವದುರ್ಗ.ಜೂ.೦೪-ಕೃಷ್ಣಾ ಭಾಗ್ಯ ಜಲ ನಿಗಮದಲ್ಲಿ ೩೦ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿಯಾದ ಸಹಾಯಕ ಇಂಜಿನಿಯರ್ ಮೈಬೂಬ್ ಸಾಬ್ ಸಂತೆಕಲ್ಲೂರಿಗೆ ತಾಲೂಕಿನ ಅಮರಾಪುರ ಗ್ರಾಮದಲ್ಲಿರುವ ಉಪವಿಭಾಗ ಕಚೇರಿಯಲ್ಲಿ ಇತ್ತೀಚೆಗೆ ಸನ್ಮಾನಿಸಿ ಬೀಳ್ಕೊಡಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿ, ನೀರಾವರಿ ಇಲಾಖೆಯಲ್ಲಿ ೩೦ವರ್ಷಗಳಿಂದ ಸೇವೆ ಸಲ್ಲಿಸಲು ಅವಕಾಶ ದೊರೆತಿರುವುದು ನನ್ನ ಭಾಗ್ಯ. ಈ ಇಲಾಖೆ ಅನ್ನ ಸೇರಿ ಆಹಾರಧಾನ್ಯ ಬೆಳೆಯುವ ರೈತರಿಗೆ ಉಪಯುಕ್ತವಾಗಿದ್ದು, ಈ ಭಾಗದ ಅನ್ನದಾತರಿಗೆ ನಾನು ನನ್ನ ಕೈಲಾದಷ್ಟು ನ್ಯಾಯ ಒದಗಿಸಿದ್ದೇನೆ. ನಾರಾಯಣಪುರ ಬಲದಂಡೆ ನಾಲೆಯಿಂದ ಪ್ರತಿವರ್ಷ ರೈತರಿಗೆ ಎರಡು ಬೆಳೆಗೆ ನೀರು ನೀಡಿರುವುದು ತುಂಬ ಖುಷಿಯ ವಿಚಾರ ಮೈಬೂಬ್ ಸಬ್ ಹೇಳಿದರು.
ಇದೇ ಸಂದರ್ಭದಲ್ಲಿ ಬಡ್ತಿ ಹೊಂದಿದ ಸಹಾಯಕ ಇಂಜಿನಿಯರ್ ಎಂ.ಎಸ್.ಭಜಂತ್ರಿ ಅವರು ಅಧಿಕಾರ ವಹಿಸಿಕೊಂಡರು. ಸಹಾಯಕ ಇಂಜಿನಿಯರ್‌ಗಳಾದ ಅಶೋಕರೆಡ್ಡಿ, ಶಿವರಾಜ ಪಾಟೀಲ್, ಶೇಖರಪ್ಪ, ಅದಮ್ ಶಫಿ, ಶ್ರೀಧರ್ ಬಲ್ಲಿದವ್, ನರೇಂದ್ರ ಪಾಟೀಲ್ ಇತರರಿದ್ದರು.