ಸಹಾಯಕ ಆಯುಕ್ತರ ವಜಾಕ್ಕೆ ವಕೀಲರ ಆಗ್ರಹ

ರಾಯಚೂರು,ಜ.೧೮- ರಾಯಚೂರು ಜಿಲ್ಲೆಯ ಸಹಾಯಕ ಆಯುಕ್ತರಾದ ರಜನಿಕಾಂತ್ ಚೌಹಾಣ್ ಅವರನ್ನು ವಜಾ ಮಾಡಬೇಕೆಂದು ಆಗ್ರಹಿಸಿ ರಾಯಚೂರು ನ್ಯಾಯವಾದಿಗಳ ಸಂಘ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಸರ್ಕಾರದ ಅಧೀನದಲ್ಲೀ ಕೆಲಸ ಮಾಡುತ್ತಿರುವ ಸಹಾಯಕ ಆಯುಕ್ತರಿಗೆ ನ್ಯಾಯಾಲಯದ ಕಲಾಪಗಳನ್ನು ಯಾವ ರೀತಿ ನಡೆಸಬೇಕು ಮತ್ತು ಆ ನ್ಯಾಯಾಲಯದ ಘನತೆ ಗೌರವವನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು ಎಂದು ಕಿಂಚಿತ್ತು ತಿಳಿದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯದ ಪೂರ್ಣ ಪ್ರಮಾಣದ ರಿಟ್ ಪಿಟಿಷನ್ ಸಂಖ್ಯೆ ೬೮೭೨/೨೦೧೩ ದಿನಾಂಕ ೨೪.೦೧.೨೦೨೦ರಲ್ಲಿ ಪ್ರಕರಣಗಳನ್ನು ಯಾವ ರೀತಿ ನಡೆಸಬೇಕೆಂದು ಮಾನದಂಡಗಳನ್ನು ಮತ್ತು ನಿಯಮಗಳನ್ನು ಆದೇಶಿಸಿದೆ. ಆದರೆ ರಾಯಚೂರಿನ ಸಹಾಯಕ ಆಯುಕ್ತರು ಆದೇಶಗಳನ್ನು ಗಾಳಿಗೆ ತೂರಿ ತಮ್ಮದೇ ಆದ ರೀತಿಯಲ್ಲಿ ಪ್ರಕರಣಗಳನ್ನು ನಡೆಸುತ್ತಿದ್ದಾರೆ ಎಂದು ದೂರಿದರು.
ಸಹಾಯಕ ಆಯುಕ್ತರು ತಾವೇ ನಿಗದಿಪಡಿಸಿರುವ ಪ್ರಕರಣಗಳ ಸಮಯಕ್ಕೆ ಸರಿಯಾಗಿ ಬಾರದೆ ನೋಟಿಸಿನಲ್ಲಿ ೩:೦೦ ಎಂದು ತಿಳಿಸಿ ೩:೩೦, ನಾಲ್ಕು ಗಂಟೆಗೆ ಬರುತ್ತಿದ್ದಾರೆ. ಬಂದ ನಂತರ ಯಾವ ಕಾರಣಕ್ಕಾಗಿ ತಡವಾಗಿ ಬಂದಿದ್ದಾರೆ ಎಂದು ತಿಳಿಸುವುದಿಲ್ಲ. ಮತ್ತು ತೆರೆದ ನ್ಯಾಯಾಲಯದಲ್ಲಿ ದೂರವಾಣಿ ಕರೆಗಳನ್ನು ಸ್ವೀಕರಿಸಿ ಗಂಟೆಗಟ್ಟಲೆ ನ್ಯಾಯ ಸ್ಥಾನದಲ್ಲಿ ಕುಳಿತು ಮಾತನಾಡುತ್ತಾರೆ. ಕಕ್ಷಿದಾರರ ಪ್ರಕರಣಗಳನ್ನು ನಿಗದಿಯಾಗದ ಹಾಜರಾದರೆ ತುರ್ತು ಕೆಲಸ ಇದೆ ಎಂದು ರದ್ದು ಮಾಡಿ ಮುಂದೂಡಲಾಗುತ್ತದೆ. ಇದರಿಂದ ವಕೀಲರಿಗೆ ಮತ್ತು ಕಕ್ಷಿದಾರರಿಗೆ ತೊಂದರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಹಾಯಕ ಆಯುಕ್ತರ ಕಚೇರಿಯ ಸಿಬ್ಬಂದಿಗಳು ವಕೀಲರಿಗೆ ಮತ್ತು ಕಕ್ಷಿದಾರರಿಗೆ ಸರಿಯಾದ ಮಾಹಿತಿ ನೀಡುವುದೇ ಅಗೌರವದಿಂದ ವರ್ತಿಸುತ್ತಿದ್ದಾರೆ. ಈ ವಿಷಯ ಸಹಾಯಕ ಆಯುಕ್ತರಿಗೆ ತಿಳಿದರೂ ಅವರು ಇದರಲ್ಲಿ ಸಮಾನವಾದ ಪಾತ್ರವನ್ನು ವಹಿಸಿದ್ದಾರೆ. ಈ ರೀತಿಯಾಗಿ ಸಾರ್ವಜನಿಕರಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸದೆ ಕಾನೂನು ಬದ್ಧವಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಖಂಡಿಸಿದರು.
ಆದ್ದರಿಂದ ಸಹಾಯಕ ಆಯುಕ್ತರನ್ನು ವಜಾ ಗೊಳಿಸುವವರೆಗೆ ಜಿಲ್ಲಾಧಿಕಾರಿಗಳು ಸಹಾಯಕ ಆಯುಕ್ತರ ಯಾವುದೇ ಪ್ರಕರಣಗಳನ್ನು ನಡೆಸದಂತೆ ಹಾಗೂ ಈಗಿರುವ ಪ್ರಕರಣಗಳಲ್ಲಿ ಯಾವುದೇ ರೀತಿ ಆದೇಶಗಳನ್ನು ಮಾಡದಂತೆ ನಿರ್ದೇಶಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎನ್ ಬಾನು ರಾಜ್, ಪ್ರಧಾನ ಕಾರ್ಯದರ್ಶಿ ಉದಯ್ ಕುಮಾರ್, ವಕೀಲರಾದ ಬಿ ಎನ್ ನಾಯಕ್, ತಾಯಪ್ಪ, ಜಿತೇಂದ್ರ, ಸೇರಿದಂತೆ ಅನೇಕ ವಕೀಲರು ಉಪಸ್ಥಿತರಿದ್ದರು.