ಸಹಸ್ರಾರು ಭಕ್ತರ ಮಧ್ಯೆ ಜರುಗಿದ ಶಮಶೀರ ನಗರದ ನಂದಿ ಬಸವೇಶ್ವರ ಜಾತ್ರೋತ್ಸವ

ಬೀದರ :ಮೇ.3:ತಾಲೂಕಿನ ಶಮಶೀರನಗರ ಗ್ರಾಮದಲ್ಲಿ ಸುಕ್ಷೇತ್ರ ನಂದಿ ಬಸವೇಶ್ವರ ಜಾತ್ರೋತ್ಸವ ಹಾಗೂ ರಥೋತ್ಸವ ಸಂಭ್ರಮ ಸಡಗರದಿಂದ ಅದ್ದೂರಿಯಾಗಿ ಅರ್ಥಪೂರ್ಣವಾಗಿ ಜರುಗಿತು. ನಂದಿಬಸವೇಶ್ವರ ಪಂಚಕಮಿಟಿ ಹಾಗೂ ಗ್ರಾಮಸ್ಥರ ವತಿಯಿಂದ ನಂದಿ ಬಸವೇಶ್ವರರ ಜಾತ್ರಾ ಮಹೋತ್ಸವ ನಿಮಿತ್ಯ ಮಂಗಳವಾರ ಸಾಯಂಕಾಲ ವಿವಿಧೆಡೆಯಿಂದ ಭಕ್ತರ ಜಯಘೋಷದ ಮಧ್ಯೆ ಹೊಸದಾಗಿ ನಿರ್ಮಿಸಿದ ರಥದ ರಥೋತ್ಸವ ಜರುಗಿತು. ಗ್ರಾಮಗಳಿಂದ ಹಾಗೂ ವಿವಿಧೆಡೆಯಿಂದ ಭಕ್ತಿ ಶ್ರದ್ಧೆಯಿಂದ ಆಗಮಿಸಿ ಭಕ್ತಸ್ತೋಮ ಅಪೂರ್ವ ಗಳಿಗೆ ಕಣ್ತುಂಬಿಕೊಂಡರು. ಭಕ್ತಾದಿಗಳು ಭಕ್ತಿ, ಶ್ರದ್ಧೆ ಮೆರೆದವರು.

ರಥೋತ್ಸವದ ಪ್ರಾರಂಭದಲ್ಲಿ ಪೂಜೆ ಸಲ್ಲಿಸಿ ನೈವೇಧ್ಯ ಅರ್ಪಿಸಿ 101 ಟೆಂಗಿನ ಕಾಯಿಗಳನ್ನು ಒಡೆಯಲಾಯಿತು. ಬೇಮಳಖೇಡದ ಹಿರೇಮಠ ಸಂಸ್ಥಾನದ ಪೂಜ್ಯ ಶ್ರೀ ಡಾ|| ರಾಜಶೇಖರ ಶಿವಾಚಾರ್ಯರು, ಬೆಳಗಾವಿ ಮುಕ್ತಿ ಮಠದ ಶಿವಸಿದ್ದ ಸೋಮೇಶ್ವರ ಶಿವಾಚಾರ್ಯರು ಹಾಗೂ ಇನ್ನುಳಿದ ಪೂಜ್ಯರ ಸಮ್ಮುಖದಲ್ಲಿ ಸಾಮೂಹಿಕವಾಗಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥಕ್ಕೆ ಹೂವಿನಿಂದ ಅಲಂಕರಿಸಿ ದೀಪಾಲಂಕಾರ ಮಾಡಲಾಗಿತ್ತು. ರಥೋತ್ಸವದಲ್ಲಿ ಪುರವಂತರು, ಡೊಳ್ಳು ನಂದಿಕೋಲು, ಸಾಂಸ್ಕøತಿಕ ತಂಡಗಳು, ಹಲಗೆ, ಭಜನ ತಂಡಗಳು ಭಾಗವಹಿಸಿ ಮೆರುಗು ಹಚ್ಚಿಸಿದರು. ಹೆಣ್ಣು ಮಕ್ಕಳು ಗಂಡುಮಕ್ಕಳು ಸೇರಿ ರಥವನ್ನು ಎಳೆದು ಭಕ್ತಿ ಭಾವ ಮೆರೆದರು. ದೇವಸ್ಥಾನದಿಂದ ಪ್ರಾರಂಭಗೊಂಡು ಮಡಿವಾಳೇಶ್ವರ ಗುಡಿ ವರೆಗೆ ತೇರು ತೆರಳಿ ಪುನಃ ದೇವಸ್ಥಾನಕ್ಕೆ ಒಂದು ಮುಕ್ತಾಯಗೊಂಡಿತು.

ಜಾತ್ರಾ ಮಹೋತ್ಸವ ಎಂಟು ದಿವಸಗಳ ನಿರಂತರವಾಗಿ ವಿವಿಧ ಕಾರ್ಯಕ್ರಮಗಳು ಜರುಗಿದವು. ಶಿವಯೋಗಿ ಸಿದ್ದರಾಮೇಶ್ವರ ಪುರಾಣ, ಪಲ್ಲಕ್ಕಿ ಉತ್ಸವ, ಹೊಸದಾಗಿ ಅಗ್ನಿ ಪ್ರವೇಶ, ವಿವಿಧ ಪೂಜೆಗಳು, ವಿವಿಧ ಗ್ರಾಮಗಳಿಂದ ಆಗಮಿಸಿದ ಭಜನಾ ತಂಡಗಳು, ಹಾಸ್ಯ, ಜಾದು, ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.

ಧರ್ಮಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬೆಳಗಾವಿ ಮುಕ್ತಿ ಮಠದ ಪರಮ ಪೂಜ್ಯರಾದ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡುತ್ತಾ ಧರ್ಮದಿಂದಲೇ ಮಾನವನ ಕಲ್ಯಾಣವಾಗುತ್ತದೆ. ಎಲ್ಲರೂ ಧರ್ಮ ದಾರಿಯಲ್ಲಿ ನಡೆಯಬೇಕು. ಮಾನವ ಜೀವನದಲ್ಲಿ ನಿರಂತರವಾಗಿ ಭಗವಂತನ ಸ್ಮರಣಿ ಮಾಡಿ ಜೀವನ ಸಾರ್ಥಕಗೊಳಿಸಬೇಕೆಂದು ಹೇಳಿದರು.

ಬೇಮಳಖೇಡದ ಹಿರೇಮಠ ಸಂಸ್ಥಾನದ ಪರಮ ಪೂಜ್ಯರಾಗಿರುವ ರಾಜಶೇಖರ ಶಿವಾಚಾರ್ಯರು ದಿವ್ಯ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡುತ್ತಾ ಜಾತ್ರೆಗಳು ಉತ್ಸವಗಳು ಹಬ್ಬ ಹರಿದಿನಗಳು ಸಮಾಜದಲ್ಲಿ ಶಾಂತಿ ಸೌಹಾರ್ದತೆ ಬೆಳೆಸುತ್ತವೆ. ಮಾನವನ ಜನ್ಮ ಸಿಗುವುದು ದುರ್ಲಾಭ, ದೇವರ ಸಾಧುಸಂತರ ಋಷಿಮುನಿಗಳ ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ತನ್ನ ಜೀವನವನ್ನು ಸಾರ್ಥಕಗೊಳಿಸಬೇಕೆಂದು ಹೇಳಿದರು. ಸಭೆಯಲ್ಲಿ ಇಟಗಾ ಮಠದ ಚೆನ್ನಮಲ್ಲೇಶ್ವರ ತ್ಯಾಗಿಗಳು, ಪೂಜ್ಯಶ್ರೀ ಶಂಭುಲಿಂಗ ಮಹಾಸ್ವಾಮಿಗಳು ಬೆಳಗಾಂವ, ನಂದಿಬಸವಣ್ಣನ ಅರ್ಚಕರಾದ ಚೆನ್ನಮಲ್ಲಯ್ಯ ಸ್ವಾಮಿ, ನಂದಿ ಬಸವಣ್ಣ ಪಂಚಕಮಿಟಿ ಅಧ್ಯಕ್ಷರಾದ ಶಿವರಾಜ ಪಾಟೀಲ್, ಬಾವಗಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಅರ್ಚಕರಾದ ಶಾಂತಕುಮಾರ ಸ್ವಾಮಿ ಪಂಚಕಮಿಟಿ ಸದಸ್ಯರಾದ ವೀರಶೆಟ್ಟಿ ಪಾಟೀಲ್, ಸೋಮನಾಥ ಮೈಲೂರ, ಧೂಳಪ್ಪಾ ತೋರಣ ಸಭೆಯಲ್ಲಿ ಮಾತನಾಡಿದರು.

ಸಭೀಕರನ್ನು ನೀಲಕಂಠಯ್ಯ ಸ್ವಾಮಿ ಇಟಗಾ ಸ್ವಾಗತಿಸಿದರು. ಯೋಗೇಂದ್ರ ಯದಲಾಪೂರೆ ಕಾರ್ಯಕ್ರಮ ನಿರೂಪಿಸಿದು. ಭೀಮಶೆಟ್ಟಿ ಹೂಗೆರೆ ವಂದಿಸಿದರು. ಕಾರ್ಯಕ್ರಮದಲ್ಲಿ ವೀರಶೆಟ್ಟಿ ಕೋಳಾರ, ಮಲ್ಲಿಕಾರ್ಜುನ ಅಡೆಪ್ಪಾ, ಸುಭಾಷ ಕೋಳಿ, ಗುರಪ್ಪಾ ತೋರಣ, ನಾಗಣ್ಣಾ ಕೋಳಿ, ಸಂಜುಕುಮಾರ ಲಕ್ಕಾ, ಅಮೃತ ಕೋಳಿ, ಶಿವಪುತ್ರ ಫುಲೇಕರ್, ಪ್ರಕಾಶ ಪಂಚಾಳ, ಧನಶೆಟ್ಟಿ ತೋರಣ, ದಶರಥ ಕೋಳಿ, ಮಲ್ಲಪ್ಪಾ ಕೋಳಿ, ಗುರುನಾಥ ಕೋಳಿ, ಭೀಮರಾವ ಫುಲಕೆಕರ್, ಸಾಯಿನಾಥ ಪಾಟೀಲ್, ಕೇದರನಾಥ ಪಾಟೀಲ್, ಗಿರಿರಾಜ ಪಾಟೀಲ್, ಚೆನ್ನವೀರ ಪಾಟೀಲ್, ವೀರಯ್ಯ ಸ್ವಾಮಿ ಹಾಗೂ ಸುತ್ತಮುತ್ತಲಿನ ಭಕ್ತರು ಆಂದ್ರ, ತೆಲಂಗಾಣ, ಮಹಾರಾಷ್ಟ್ರ, ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸಿದ ಸದ್ಭಕ್ತರು ಭಾಗವಹಿಸಿದರು. ಭಕ್ತರಿಗಾಗಿ ಪ್ರಸಾದ ವ್ಯವಸ್ಥೆ ಮಾಡಲಾಯಿತು.