ಸಹಸ್ರಾರು ಭಕ್ತರ ನಡುವೆ ವಿಜೃಂಭಣೆಯ ವೀರಾಂಜನೇಯ ಉತ್ಸವ

ಬೆಟ್ಟದಪುರ:ಮಾ:26: ಸಮೀಪದ ಹಾರನಹಳ್ಳಿ ಗ್ರಾಮದಲ್ಲಿ ವೀರಾಂಜನೇಯ ಸ್ವಾಮಿ ಉತ್ಸವವನ್ನು ವಿಜೃಂಬಣೆಯಿಂದ ಸಹಸ್ರಾರು ಭಕ್ತಾದಿಗಳ ನಡುವೆ ನೆರವೇರಿಸಲಾಯಿತು.
ಹಾರನಹಳ್ಳಿ ಗ್ರಾಮದ ವೀರಾಂಜನೇಯ ಹಾಗೂ ಹಂಚ್ಯಾದಮ್ಮ (ಲಕ್ಷ್ಮಿದೇವಿ) ಮನೆದೇವರ ಸುಮಾರು 60 ಕುಟುಂಬಗಳು ಗ್ರಾಮಸ್ಥರೊಂದಿಗೆ ಒಟ್ಟುಗೂಡಿ ಈ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸುವುದು ಈ ಗ್ರಾಮದ ವಿಶೇಷವಾಗಿದೆ. ಈ ಉತ್ಸವವು ಸುಮಾರು 14 ವರ್ಷಗಳ ನಂತರ ನಡೆಸಲು ಸಕಲ ಸಿದ್ದತೆಗಳನ್ನು ನಡೆಸಿ, ಉತ್ಸವದ ಪ್ರಯುಕ್ತ ಕೆ.ಆರ್ ಪೇಟೆ ಸಮೀಪದ ಕೊಡಾಲ ಗ್ರಾಮದ ಶ್ರೀ ವೀರಾಂಜನೇಯ ದೇವಾಲಯದಿಂದ ದೇವರ ಉತ್ಸವ ಮೂರ್ತಿಯನ್ನು ಹಾರನಹಳ್ಳಿ ಗ್ರಾಮಕ್ಕೆ ಬರಮಾಡಿಕೊಂಡು, ಇಲ್ಲಿನ ಶ್ರೀ ಬಸವೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಿ 9 ದಿನಗಳಿಂದಲೂ ವಿಶೇಷ ಪೂಜೆ ಜರುಗಿದವು. ಅಕ್ಕಪಕ್ಕದ ತಾಲ್ಲೂಕು, ಜಿಲ್ಲೆಗಳಿಂದಲೂ ಭಕ್ತಾದಿಗಳು ಆಗಮಿಸಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದರು.
ಹಬ್ಬದ ಪ್ರಯುಕ್ತ ಗ್ರಾಮದ ಬೀದಿಗಳಿಗೆ ತಳಿರು ತೋರಣ, ಬಣ್ಣಬಣ್ಣದ ವಿದ್ಯುತ್ ದೀಪಾಲಂಕಾರ ಹಾಗೂ ಕೇಸರಿ ಬಾವುಟಗಳೊಂದಿಗೆ ಕಂಗೊಳಿಸುತ್ತಿದ್ದವು. ಉತ್ಸವದ ಬಳಿಕ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು ನಂತರ ಶ್ರೀ ವೀರಾಂಜನೇಯ ಸ್ವಾಮಿ ಮೂರ್ತಿಯನ್ನು ಮೂಲಸ್ಥಾನಕ್ಕೆ ಧಾರ್ಮಿಕ ವಿಧಾನಗಳ ಮೂಲಕ ಕಳುಹಿಸಿಕೊಡಲಾಯಿತು.