ಸಹಭಾಗಿತ್ವದಲ್ಲಿ ಡೆಂಗ್ಯೂ ನಿಯಂತ್ರಿಸಲು ಕರೆ

ಕೋಲಾರ, ಮೇ,೧೭-ಡೆಂಗ್ಯೂ ಇಂತಹ ಅನೇಕ ರೋಗಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು. ನಮ್ಮ ಮನೆ ಮತ್ತು ಸುತ್ತಮುತ್ತಲಿನ ಪರಿಸರವನ್ನು ಪ್ರತಿಯೊಬ್ಬರು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. “ಎಲ್ಲರ ಸಹಭಾಗಿತ್ವದೊಂದಿಗೆ ಡೆಂಗ್ಯಿಯನ್ನು ಸೋಲಿಸೋಣ” ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್ ತಿಳಿಸಿದರು.
ಇಂದ ನಗರದ ಎಸ್.ಎನ್.ಆರ್ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಡೆಂಗೀ ದಿನಾಚರಣೆ ಪ್ರಯುಕ್ತ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮನುಷರಿಗೆ ಆರೋಗ್ಯ ಎಂಬುದು ಮುಖ್ಯವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ರೋಗಗಳು ಪತ್ತೆಯಾಗುತ್ತಿದೆ. ಇದರಲ್ಲಿ ಡೆಂಗ್ಯೂ ಜ್ವರವು ಸಹ ಒಂದಾಗಿದ್ದು, ಇದರ ಬಗ್ಗೆ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಪ್ರತಿಯೊಬ್ಬರು ಸಹ ತಮ್ಮ ಜವಾಬ್ದಾರಿಯನ್ನು ಅರಿತು ರೋಗದಿಂದ ದೂರವಿರಿ. ಮನೆಯಲ್ಲಿ ಇರುವ ನೀರಿನ ತೊಟ್ಟಿಗಳು, ಡ್ರಂಗಳು ಮತ್ತು ಸಿಂಟೆಕ್ಸ್‌ಗಳನ್ನು ಕನಿಷ್ಠ ವಾರಕ್ಕೆ ಒಂದು ಬಾರಿ ಸ್ವಚ್ಛಗೊಳಿಸಬೇಕು. ಮನೆಯ ಸುತ್ತಮುತ್ತ ಎಸೆದಿರುವ ವಸ್ತುಗಳಲ್ಲಿ ಮಳೆ ನೀರು ಶೇಖರಣೆಯಾಗದಂತೆ ಎಚ್ಚರಿಕೆ ವಹಿಸುವುದು. ಈಡಿಸ್ ಸೊಳ್ಳೆಗಳು ಹಗಲು ಹೊತ್ತಿನಲ್ಲಿ ಕಚ್ಚುವುದರಿಂದ ಹಗಲು ಹೊತ್ತಿನಲ್ಲಿ ವಿಶ್ರಾಂತಿ ಪಡೆಯುವವರು, ವಿಶೇಷವಾಗಿ ಮಕ್ಕಳು, ವೃದ್ಧರು ಹಾಗೂ ಗರ್ಭಿಣಿಯರು ಸೊಳ್ಳೆ ಪರದೆಯನ್ನು ಬಳಸಬೇಕು ಎಂದರು.
ತಾಲ್ಲೂಕು ವೈದ್ಯಾಧಿಕಾರಿ ಡಾ. ನಾರಾಯಣಸ್ವಾಮಿ ಅವರು ಮಾತನಾಡಿ, ಪ್ರತಿ ವಷವೂ ಒಂದು ಘೋಷಣೆಯೊಂದಿಗೆ ಈ ಡೆಂಗೀ ದಿನಾಚರಣೆಯನ್ನು ಆಚರಣೆ ಮಾಡುತ್ತಿದ್ದು ಈ ವಷದ ಘೋಷವಾಕ್ಯ “ಎಲ್ಲರ ಸಹಭಾಗಿತ್ವದೊಂದಿಗೆ ಡೆಂಗ್ಯಿಯನ್ನು ಸೋಲಿಸೋಣ” ಎಂಬ ಘೋಷವಾಕ್ಯವಾಗಿದೆ. ಈ ರೋಗದ ಬಗ್ಗೆ ಜನರಿಗೆ ಅರಿವು ಮೂಡಿಸಲು ಈ ಜಾಥಾ ಕಾರ್ಯಕ್ರಮವನ್ನು ನಡೆಸಲಾಗುತ್ತಿದ್ದು ಡೆಂಗೀ ಜ್ವರವು ಸೊಳ್ಳೆ ಕಡಿತದಿಂದ ಹರಡುವಂತಹ ಕಾಯಿಲೆಯಾಗಿದ್ದು, ಇದು ಈಡೀಸ್ ಈಜಿಪ್ಟಿ ಎಂಬ ಸೊಳ್ಳೆ ಕಡಿತದಿಂದ ಹರಡುತ್ತದೆ. ಸೊಳ್ಳೆಗಳು ಯಾವ ರೀತಿ ಉತ್ಪತ್ತಿಗೆ ಕಾರಣಗಳೇನು ಎಂಬುದನ್ನು ಸಾರ್ವಜನಿಕರಿಗೆ ತಿಳಿಸಿ ಅವರಲ್ಲಿ ರೋಗ ತಡೆಗಟ್ಟಲು ಅರಿವು ಮೂಡಿಸುವುದು ಈ ಜಾಥಾದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.ರಾಷ್ಟ್ರೀಯ ಡೆಂಗ್ಯೂ ದಿನ ಕುರಿತ ಜಾಗೃತಿ ಕರಪತ್ರವನ್ನು ಬಿಡುಗಡೆಗೊಳಿಸಿದರು.ಜಾಥಾವು ಎಸ್.ಎನ್.ಆರ್ ಜಿಲ್ಲಾಸ್ಪತ್ರೆಯಿಂದ ಪ್ರಾರಂಭವಾಗಿ ಎಂ.ಜಿ ರಸ್ತೆ, ಅಮ್ಮಾವಾರಿ ಪೇಟೆ ಸರ್ಕಲ್, ನೆಲಗಂಗಮ್ಮ ದೇವಾಲಯ ರಸ್ತೆ, ಮೆಕ್ಕೆ ವೃತ್ತ ಮುಖಾಂತರನಚಿಕೇತ ನಿಲಯದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಮೂಲಕ ಅಂತ್ಯಗೊಂಡಿತು.
ಆರ್.ಎಂ.ಓ ಡಾ.ಬಾಲಸುಂದರ್, ಜಿಲ್ಲಾ ಕೀಟಜನ್ಯ ರೋಗವಾಹಕ ನಿಯಂತ್ರಣಾಧಿಕಾರಿ ಡಾ|| ಪ್ರಸನ್ನ ಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಚಂದನ್, ಕೀಟಶಾಸ್ತ್ರಜ್ಞ ವೇಣುಗೋಪಾಲ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗಾಯಿತ್ರಿ, ರೇಣುಕಾದೇವಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸತ್ಯನಾರಾಯಣಗೌಡ, ಶುಶ್ರೂಷಣಾ ಅಧೀಕ್ಷಕಿ ಎಸ್.ವಿಜಿಯಮ್ಮ, ಆಶಾ ಕಾರ್ಯಕರ್ತೆಯರು, ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.