ಸಹಜ ಸ್ಥಿತಿಯೋಗ ಸತ್ಸಂಗದಿಂದ ಯೋಗ ದಿನಾಚರಣೆ

ಕಲಬುರಗಿ,ಜೂ.23-ಸಹಜ ಸ್ಥಿತಿ ಯೋಗ ಸತ್ಸಂಗದ ವತಿಯಿಂದ 9ನೇ ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯನ್ನು ನಗರದ ಘಾಟಗೆ ಲೇಚೌಟ್‍ನಲ್ಲಿರುವ ಶ್ರೀ ಗುರುದತ್ತ ಧ್ಯಾನ ಮಂದಿರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ.ಸ್ಮಿತಾ ಬಿ.ಕಣ್ಣುಸೆ ಅವರು ರಾಷ್ಟ್ರಮಟ್ಟದ ಯೋಗಪಟು ಅಭಿಶೇಕ ಭೀಮಳ್ಳಿ ಇವರಿಂದ ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯ ಶಿಷ್ಠಾಚಾರದಂತೆ ಮುಖ್ಯವಾದ ಯೋಗಾಸನಗಳನ್ನು ಎಲ್ಲಾ ಸತ್ಸಂಗಿಯವರಿಗೆ ಅಭ್ಯಾಸ ಮಾಡಿಸಿದರು. ಮತ್ತು ಯೋಗದ ಕುರಿತು ಮಾತನಾಡುತ್ತಾ “ಒಂದೇ ಕುಟುಂಬ ಒಂದೇ ಭವಿಷ್ಯಾ ಅಥವಾ ವಸುದೈವ ಕುಟುಂಬಕಂ” ಧೈಯದೊಂದಿಗೆ ಹಮ್ಮಿಕೊಂಡ ಈ ಕಾರ್ಯಕ್ರಮವು ಈಗಿನ ಸ್ಪರ್ಧಾತ್ಮಕ ಕಾಲದಲ್ಲಿ, ವಿದ್ಯಾರ್ಥಿಗಳು ಮತ್ತು ಯುವಕರಿಗೆ ಅವಶ್ಯಕವಾಗಿದೆ. ರಕ್ತದೊತ್ತಡ, ಮಧುಮೇಹ, ನರದೌರ್ಬಲ್ಯ, ಸಿಡುಕತನ, ಹಸಿವು ಆಗದಿರುವಿಕೆ, ನಿದ್ರಾಹಿನತೆ ಮುಂತಾದ ರೋಗಗಳಿಂದ ಮುಕ್ತಿಹೊಂದಲು ಯೋಗಾಸನಗಳು, ಧ್ಯಾನ ಮತ್ತು ಪ್ರಾಣಾಯಾಮ ಇವು ರಾಮಬಾಣವಿದ್ದಂತೆ, ಒಳ್ಳೆಯ ಆರೋಗ್ಯವಂತ ಪ್ರಜೆಗಳಿಂದ ಉತ್ತಮ ಸಮಾಜ ಮತ್ತು ರಾಷ್ಟ್ರ ಕಟ್ಟಲು ಸಾಧ್ಯ. ಅದನ್ನು ಸಾಧಿಸಲು ನಾವೆಲ್ಲರೂ ನಮ್ಮ ಪ್ರತಿನಿತ್ಯದ ಜೀವನದಲ್ಲಿ ಯೋಗಾಸನಗಳ ಅಭ್ಯಾಸ ಮಾಡುತ್ತಾ ಆರೋಗ್ಯವಂತ ಮತ್ತು ಉತ್ತಮ ಪ್ರಜೆಗಳಾಗೋಣ” ಎಂದು ಕರೆಕೊಟ್ಟರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಸತ್ಸಂಗಿಗಳು ಹಾಗೂ ಟ್ರಸ್ಟಿಗಳಾದ ಪದ್ಮಾ ಶ್ರೀನಿವಾಸ ಅವರು “ಯೋಗ ಎಂದರೆ ಕೊಡುವುದು ಎಂದರ್ಥ, ಪೂರ್ಣ ಏಕಾಗ್ರತೆಯಿಂದ ಸರ್ಮಪಣಾ ಮನೋಭಾವದಿಂದ ಮಾಡುವ ಎಲ್ಲಾ ಕಾರ್ಯಗಳು ಯೋಗವಿದ್ದಂತೆ, “ಯೋಗ ಚಿತ್ತ ವೃತ್ತಿ ನಿರೋಧ” ಎನ್ನುವಂತೆ ಮನಸ್ಸನ್ನು ನಿಯಂತ್ರಣದಲ್ಲಿಡಲು ಯೋಗದಿಂದ ಮಾತ್ರ ಸಾಧ್ಯ” ಎಂದರು.
ಈ ಕಾರ್ಯಕ್ರಮದ ನಿರೂಪಣೆಯನ್ನು ಹಿರಿಯ ಸತ್ಸಂಗಿಗಳಾದ ಶಾಂತಪ್ಪ ಬಂದರವಾಡ ಅವರು ನಿರ್ವಹಿಸಿದರು. ವೀರಣ್ಣ ಶಾಹಾಬಾದಕರ ಅತಿಥಿಗಳನ್ನು ಪರಿಚಯಿಸಿ ಸ್ವಾಗತ ಕೋರಿದರು, ನಿರ್ಮಲಾ ರವರು ಪ್ರಾರ್ಥನಾ ಗೀತೆ ಹಾಡಿದರು. ಕೇಂದ್ರ ಸಂಚಾಲಕ ರಾಜಶೇಖರ ಪಾಟೀಲ ರವರು ವಂದನಾರ್ಪಣೆ ಸಲ್ಲಿಸಿದರು.