ಸಹಜ ಸ್ಥಿತಿಯತ್ತ ಸಾರಿಗೆ: ರಾಮನಗೌಡರ ವಿಶ್ವಾಸ

ಹುಬ್ಬಳ್ಳಿ ಏ 21 : ಆರನೇ ವೇತನ ಆಯೋಗ ಸೇರಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಾರಿಗೆ ಸಂಸ್ಥೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರದಿಂದಾಗಿ ಏ.7 ರಿಂದ ವ್ಯತ್ಯಯವಾಗಿದ್ದ ಸಾರ್ವಜನಿಕ ಸಾರಿಗೆ ವ್ಯವಸ್ಥೆ, ದಿನ ಕಳೆದಂತೆ ಸುಧಾರಿಸತೊಡಗಿದೆ.
ಇಂದು 12ಗಂಟೆಯ ವೇಳೆಗೆ ಗ್ರಾಮಾಂತರ ವಿಭಾಗದ ಮತ್ತು ನಗರಸಾರಿಗೆ ವಿಭಾಗದ ಡಿಪೆÇೀಗಳಿಂದ 300ಕ್ಕೂ ಹೆಚ್ಚು ಬಸ್ಸುಗಳು ಸಂಚಾರ ಆರಂಭಿಸಿವೆ. ನಿನ್ನೆ ಈ ವೇಳೆಗೆ 200ರಷ್ಟು ಬಸ್ಸುಗಳು ಸಂಚರಿಸುತ್ತಿದ್ದವು. ದಿನದಿಂದ ದಿನಕ್ಕೆ ಕರ್ತವ್ಯಕ್ಕೆ ಮರಳುತ್ತಿರುವ ನೌಕರರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಮಧ್ಯಾಹ್ನದ ನಂತರ ಬಹಳಷ್ಟು ಬಸ್ಸುಗಳನ್ನು ರಸ್ತೆಗಿಳಿಸಲಾಗುತ್ತದೆ. ಸಂಜೆಯ ವೇಳೆಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸಹಜ ಸ್ಥಿತಿಗೆ ಬರುವ ವಿಶ್ವಾಸವಿದೆ ಎಂದು ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು ಮುಷ್ಕರದ ಆರಂಭದಲ್ಲಿ ಸಿಬ್ಬಂದಿ ಹೆಚ್ಚಿನ ಪ್ರಮಾಣದ ಸಿಬ್ಬಂದಿ ಗೈರು ಹಾಜರಾಗಿದ್ದರಿಂದಾಗಿ ಕಡಿಮೆ ಸಂಖ್ಯೆಯ
ಬಸ್ಸುಗಳು ಸಂಚರಿಸುತ್ತಿದ್ದವು. ಹಾಗಾಗಿ ಪ್ರಯಾಣಿಕರ ಬೇಡಿಕೆ ಹೆಚ್ಚಿರುವ ಪ್ರಮುಖ ಊರುಗಳಿಗೆ ಬಸ್ಸುಗಳು ಸಂಚರಿಸುತ್ತಿದ್ದವು. ಇದೀಗ ಪರಿಸ್ಥಿತಿ ಸಹಜ ಸ್ಥಿತಿಯತ್ತ ಮರಳುತ್ತಿದೆ. ಗ್ರಾಮೀಣ ಪ್ರದೇಶಗಳಿಗೂ ಬಸ್ ಸಂಚಾರ ಆರಂಭಿಸಲಾಗಿದೆ ಎಂದು ಅವರು ಹೇಳಿದರು.
ಮುಂದಿನ ದಿನಗಳಲ್ಲಿ ಸಾರಿಗೆ ನೌಕರರ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹಾಜರಾಗಲಿದ್ದು, ಮೊದಲಿನಂತೆ ಸಾರಿಗೆ ಸಂಚಾರ ಆರಂಭವಾಗಲಿದೆ. ಸಾರ್ವಜನಿಕರಿಗೆ ಸಾರಿಗೆ ಸೌಲಭ್ಯ ಸಮಯಕ್ಕೆ ತಕ್ಕಂತೆ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.