ಬೆಂಗಳೂರು, ಅ. ೩- ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಕಲ್ಲು ತೂರಾಟ, ಗಲಭೆಯಿಂದ ನಲುಗಿದ್ದ ಶಿವಮೊಗ್ಗ ಈಗ ಸಹಜ ಸ್ಥಿತಿಗೆ ಮರಳಿದೆ.
ಗಲ್ಲು ತೂರಾಟ ನಡೆಸಿದ್ದ ಶಿವಮೊಗ್ಗದ ರಾಗಿ ಗುಡ್ಡ ಪ್ರದೇಶದಲ್ಲೂ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಎಲ್ಲವೂ ಮಾಮೂಲಿ ಸ್ಥಿತಿಗೆ ಮರಳಿದೆ.
ಕಳೆದ ಭಾನುವಾರ ರಾತ್ರಿ ಈದ್‌ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಶಿವಮೊಗ್ಗದ ರಾಗಿಗುಡ್ಡ ಪ್ರದೇಶದಲ್ಲಿ ಕಲ್ಲು ತೂರಾಟ ನಡೆದಿತ್ತು. ಈ ಸಂದರ್ಭದಲ್ಲಿ ಎರಡು ಗುಂಪಿನ ನಡುವೆ ಘರ್ಷಣೆ ನಡೆದು ಕೆಲ ಮನೆ, ವಾಹನಗಳ ಮೇಲೂ ಕಲ್ಲು ತೂರಲಾಗಿತ್ತು. ಲಾಠಿ ಚಾರ್ಚ್ ನಡೆಸಿ ಕಲ್ಲು ತೂರಾಟ ನಡೆಸಿದ್ದವರನ್ನು ಚದುರಿಸಿದ್ದರು. ಹಾಗೆಯೇ ನಿಷೇಧಾಜ್ಞೆಯನ್ನು ಶಿವಮೊಗ್ಗದಾದ್ಯಂತ ಜಾರಿಗೊಳಿಸಲಾಗಿತ್ತು.
ಈಗ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ್ದು, ಈ ಗಲಾಟೆಗೆ ಸಂಬಂಧಿಸಿದಂತೆ ಇದುವರೆಗೂ ೬೦ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಶಿವಮೊಗ್ಗದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆಯನ್ನು ಮುಂದುವರೆಸಲಾಗಿದೆ. ಪರಿಸ್ಥಿತಿಯನ್ನು ನೋಡಿಕೊಂಡು ಪೊಲೀಸರು ನಿಷೇಧಾಜ್ಞೆ ತೆರವುಗೊಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ.
ಗಲಾಟೆ: ತಪ್ಪಿತಸ್ಥರಿಗೆ ಶಿಕ್ಷೆ: ಮಧು ಬಂಗಾರಪ್ಪ
ಶಿವಮೊಗ್ಗದಲ್ಲಿ ಈದ್‌ಮಿಲಾದ್ ಮೆರವಣಿಗೆ ವೇಳೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೂ ೨೪ ಎಫ್‌ಐಆರ್ ದಾಖಲಿಸಿದ್ದಾರೆ. ಕಾನೂನು ಎಲ್ಲರಿಗೂ ಒಂದೇ. ಎಲ್ಲರಿಗೂ ಒಂದೇ ರೀತಿಯ ಶಿಕ್ಷೆಯಾಗುತ್ತದೆ ಎಂದು ಶಿಕ್ಷಣ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಗಲಾಟೆ ಸಂದರ್ಭದಲ್ಲಿ ಯಾರಿಗೂ ಗಂಭೀರ ಗಾಯಗಳೇನೂ ಆಗಿಲ್ಲ. ಸಣ್ಣಪುಟ್ಟ ಗಾಯಗಳಾಗಿರಬಹುದು ಅಷ್ಟೆ. ಈ ಘಟನೆಯಲ್ಲಿ ಯಾರೇ ಭಾಗಿಯಾಗಿದ್ದರೂ ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ. ಪ್ರಕರಣ ಸಂಬಂಧ ತನಿಖೆ ನಡೆದಿದ್ದು, ಪೊಲೀಸರು ಎಲ್ಲಾ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ ಎಂದರು.
ಈ ಗಲಾಟೆಯಲ್ಲಿ ಯಾರೇ ಭಾಗಿಯಾಗಿದ್ದರೂ ಅವರನ್ನು ಬಿಡುವುದಿಲ್ಲ. ಕಾನೂನು ಎಲ್ಲರಿಗೂ ಒಂದೇ. ಎಲ್ಲರಿಗೂ ಶಿಕ್ಷೆಯಾಗುತ್ತದೆ ಎಂದು ಅವರು ತಿಳಿಸಿದರು.