ಸಹಕಾರ-ಸ್ವಾವಲಂಬಿ ಬದುಕಿಗೆ ಧರ್ಮಸ್ಥಳ ಕ್ಷೇತ್ರ ಪ್ರೇರಣೆ

ಪುತ್ತೂರು,ನ.೧೦- ಆಧ್ಯಾತ್ಮಿಕ ಬದುಕಿನ ಜತೆಗೆ ಜ್ಞಾನಾಧಾರಿತ ಬದುಕು ನೀಡುವ ಕಾರ್ಯ ಧರ್ಮಸ್ಥಳ ಕ್ಷೇತ್ರದ ಮೂಲಕ ನಡೆಯುತ್ತಿದೆ. ಮನುಷ್ಯನಿಗೆ ಮಾನವೀಯ ಬದುಕು ನೀಡುತ್ತಿದೆ. ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ಸರ್ಕಾರ ಮತ್ತು ಸಂಘ ಸಂಸ್ಥೆಗಳಿಗೆ ಮಾರ್ಗದರ್ಶನ ನೀಡಲಾಗುತ್ತಿದೆ. ಆತ್ಮನಿರ್ಭರ ಭಾರತ ಯೋಜನೆ ಜಾರಿಗಿಂತ ಮೊದಲೇ ಅದಕ್ಕೆ ಪೂರಕವಾಗಿ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ಗ್ರಾಮೀಣ ಪ್ರದೇಶದ ಜನರಿಗೆ ಸಹಕಾರ ಮತ್ತು ಸ್ವಾವಲಂಭಿ ಬದುಕಿಗೆ ಪ್ರೇರಣೆ ನೀಡಿದೆ ಎಂದ ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮದಲ್ಲಿ ಅಂತರ್ಜಾಲ ಶಿಕ್ಷಣ ವ್ಯವಸ್ಥೆ ‘ಜ್ಞಾನತಾಣ’ದ ಉದ್ಘಾಟನೆಯನ್ನು ಸೋಮವಾರ ಯೋಜನೆಯ ಪುತ್ತೂರು ಕಚೇರಿಯಲ್ಲಿ ನಡೆಸಿದರು.
ಅಧ್ಯಕ್ಷತೆ ವಹಿಸಿದ್ದ ನಗರ ಸಭಾ ಅಧ್ಯಕ್ಷ ಕೆ. ಜೀವಂಧರ್ ಜೈನ್, ನಗರದ ವಿದ್ಯಾರ್ಥಿಗಳಂತೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೂ ಶಿಕ್ಷಣದಲ್ಲಿ ಮುಂದುವರಿಯಲು ಜ್ಞಾನ ತಾಣ ಸಹಕಾರಿಯಾಗಲಿದೆ ಎಂದರು. ಪ್ರಸ್ತಾವನೆಗೈದ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ವಿದ್ಯಾಭ್ಯಾಸಕ್ಕೆ ಪೂರಕವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸಂಕಷ್ಟ ಪರಿಹರಿಸುವ ನಿಟ್ಟಿನಲ್ಲಿ ಈ ವ್ಯವಸ್ಥೆ ಆರಂಭಿಸಲಾಗಿದೆ. ಯೋಜನೆಯ ಮುಖಾಂತರ ಜ್ಞಾನತಾಣ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಏಕ ಕಾಲದಲ್ಲಿ ಚಾಲನೆ ನೀಡಲಾಗುತ್ತಿದೆ. ಈ ಯೋಜನೆಯ ಮೂಲಕ ೨೦ ಸಾವಿರ ಟ್ಯಾಬ್ ೧೦ ಸಾವಿರ ಲ್ಯಾಪ್‌ಟಾಪ್ ವಿತರಣೆಯಾಗಲಿದೆ ಎಂದರು. ಈ ಸಂದರ್ಭ ಸಾಂಕೇತಿಕವಾಗಿ ಲ್ಯಾಪ್‌ಟಾಪ್ ಹಾಗೂ ಟ್ಯಾಬ್‌ನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ವೇದಿಕೆಯಲ್ಲಿ ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಮಹಾಬಲ ರೈ ವಳತ್ತಡ್ಕ, ಕೇಂದ್ರ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಗೌಡ ಹಾರ್ಪಳ, ನಗರ ಸಭಾ ಸದಸ್ಯೆ ಹಾಗೂ ಬಪ್ಪಳಿಗೆ ಒಕ್ಕೂಟದ ಅಧ್ಯಕ್ಷೆ ದೀಕ್ಷಾ ಪೈ ಉಪಸ್ಥಿತರಿದ್ದರು.
ತಾಲೂಕು ಯೋಜನಾಧಿಕಾರಿ ಆನಂದ ಸ್ವಾಗತಿಸಿದರು. ಉಮೇಶ್ ವಂದಿಸಿದರು. ಮೇಲ್ವಿಚಾರಕಿ ಪಾವನ ಕಾರ್ಯಕ್ರಮ ನಿರೂಪಿಸಿದರು.