ಸಹಕಾರ ಸಂಘಗಳ ಬಲವರ್ಧನೆಯಿಂದ ರೈತರ ಪ್ರಗತಿ: ಬಿ.ಕೆ.ರವಿಕುಮಾರ್

ಚಾಮರಾಜನಗರ, ಜೂ.29:- ತಾಲೂಕಿನ ಬಿಸಲವಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮಹದೇವಯ್ಯ ಉಪಾಧ್ಯಕ್ಷರಾಗಿ ಎಸ್. ಸಿದ್ದಶೆಟ್ಟಿ ಇಂದು ಅವಿರೋಧವಾಗಿ ಆಯ್ಕೆಯಾದರು.
ಸಂಘದ ಅಧ್ಯಕ್ಷ-ಉಪಾಧ್ಯಕ್ಷರಾಗಿದ್ದ ಸಿದ್ಧನಾಯಕ ಮತ್ತು ಶಿವಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸಹಕಾರ ಸಂಘದ ಕಚೇರಿ ಸಭಾಂಗಣದಲ್ಲಿ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಮಹದೇವಯ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಸಿದ್ದಶೆಟ್ಟಿ ಇವರಿಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆಯ ಅಧಿಕಾರಿ ತ್ಯಾಗರಾಜು ಅವರು ಅಧಿಕೃತವಾಗಿ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಯನ್ನು ಘೋಷಣೆ ಮಾಡಿದರು.
ಗ್ರಾಮಗಳ ಅಭಿವೃದ್ದಿಗೆ ಸಹಕಾರಿ ಕ್ಷೇತ್ರ ಉತ್ತಮ : ಸಂಘದ ನೂತನ ಅಧ್ಯಕ್ಷ- ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ. ರವಿಕುಮಾರ್ ಸಹಕಾರ ಸಂಘಗಳ ಬೆಳವಣಿಗೆಯಿಂದ ರೈತರ ಪ್ರಗತಿ ಹಾಗೂ ಗ್ರಾಮದ ಅಭಿವೃದ್ದಿ ಸಾಧ್ಯವಿದೆ. ರೈತರ ಸಂಸ್ಥೆಯಾಗಿರುವ ಸಹಕಾರ ಸಂಸ್ಥೆಗಳು ಅವರ ಅಶೋತ್ತರಗಳಿಗೆ ಸ್ಪಂದಿಸುವ ಜೊತೆಗೆ ಸರ್ಕಾರದ ಸಲವತ್ತುಗಳನ್ನು ಪ್ರಾಮಾಣಿಕವಾಗಿ ರೈತರಿಗೆ ತಲುಪಿಸುವಲ್ಲಿ ನೆರವಾಗುತ್ತಿವೆ ಎಂದರು.
ಇಂಥ ಸಂಸ್ಥೆಯ ಅಧ್ಯಕ್ಷ, ಉಪಾಧ್ಯಕ್ಷರಾಗಿರುವ ತಾವುಗಳು ಸಂಘದ ಪ್ರಗತಿಯ ಬಗ್ಗೆ ಹೆಚ್ಚಿನ ಗಮನ ವಹಿಸಭೇಕು. ಸಹಕಾರ ತತ್ವದಡಿಯಲ್ಲಿ ಪರಸ್ಪರ ಹೊಂದಾಣಿಕೆಯೊಂದಿಗೆ ರೈತರಿಗೆ ಹೆಚ್ಚಿನ ಸಾಲ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ರವಿಕುಮಾರ್ ತಿಳಿಸಿದರು.
ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಸಹಕಾರ ಸಂಘಗಳು ಅವರ ಕೃಷಿ ಚಟುವಟಿಕೆಗಳಿಗೆ, ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ನೀಡುತ್ತಿದೆ ಅವರ ಆರ್ಥಿಕ ಪ್ರಗತಿಗೆ ಹೆಚ್ಚಿನ ಒತ್ತು ನೀಡುತ್ತಿವೆ. ಈವರೆಗೆ ಬಿಸಲವಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ 3 ಕೋಟಿ ರೂ.ಗಳಿಗೂ ಹೆಚ್ಚು ಸಾಲವನ್ನು ನೀಡಲಾಗಿದೆ. ನೂತನ ಅಧ್ಯಕ್ಷರು ಇನ್ನಷ್ಟು ಸಾಲಸೌಲಭ್ಯಗಳನ್ನು ರೈತರಿಗೆ ಕಲ್ಪಿಸಿ, ಸಂಘದ ಸರ್ವತೋಮುಖ ಬೆಳವಣಿಗೆಗೆ ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ಬಳಿಕ ಸಂಘದ ನೂತನ ಅಧ್ಯಕ್ಷ ಮಹದೇವಯ್ಯ, ಉಪಾಧ್ಯಕ್ಷ ಎಸ್. ಸಿದ್ದಶೆಟ್ಟಿ ಮಾತನಾಡಿ, ಗ್ರಾಮದ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ನಮ್ಮನ್ನು ಆಯ್ಕೆಮಾಡಲು ಕಾರಣಕರ್ತರಾದ ಸಂಘದ ಎಲ್ಲಾ ನಿರ್ದೇಶಕರಿಗೆ ಹಾಗೂ ಗ್ರಾಮಸ್ಥರಿಗೆ ಅಭಾರಿಯಾಗಿದ್ದೇನೆ. ಎಲ್ಲರ ಸಹಕಾರ ಪಡೆದು ಸಂಘದಿಂದ ರೈತರಿಗೆ ಹೆಚ್ಚಿನ ಸೌಲಭ್ಯವನ್ನು ಕೊಡಿಸಲು ಬದ್ದರಾಗಿರುವುದಾಗಿ ತಿಳಿಸಿದರು.
ಸಭೆಯಲ್ಲಿ ಸಂಘದ ನಿರ್ದೇಶಕರಾದ ಎಸ್. ಮಂಜುನಾಥ, ಸಿದ್ದಮಲ್ಲಪ್ಪ, ಎಲ್. ಶಿವಕುಮಾರ್, ಎಸ್. ಶಿವಕುಮಾರ್, ಎಸ್. ಸಿದ್ದೇಗೌಡ, ರಾಜಮ್ಮ, ಸಿಇಓ ಅಶೋಕ ಇದ್ದರು. ಈ ಸಂದರ್ಭದಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಸಿ. ಮಹದೇವಪ್ಪ, ಎಸ್. ಗಿರೀಶ, ಸದಸ್ಯರಾದ ನಾಗರತ್ನಮ್ಮ ನಾರಾಯಣ ನಾಯಕ, ರಮ್ಯ ನಾಗರಾಜು, ಗೀತಾ ಚನ್ನಬಸಪ್ಪ, ಮುಖಂಡರಾದ ಕೊತ್ತಲವಾಡಿ ಸೋಮಲಿಂಗಪ್ಪ, ಬಿ. ಶಾಂತಮಲ್ಲಪ್ಪ, ಎಸ್. ಉಮೇಶ, ಶಿವರುದ್ರಪ್ಪ, ಪ್ರಭುಸ್ವಾಮಿ ಶಿವಣ್ಣ, ಎಂ.ರವಿ, ಚೆಲುವರಾಜು, ಸಿದ್ದಮಲ್ಲಶೆಟ್ಟಿ, ಗುರುಮಲ್ಲು, ಪ್ರಕಾಶ, ಮಹದೇವಯ್ಯ, ಬಸವರಾಜು, ರಮೇಶ, ಸಿಇಓ ಎಸ್.ಅಶೋಕ್, ಗುಮಾಸ್ತ ಎಂ. ಪ್ರಸನ್ನಕುಮಾರ್, ಆಟೆಂಡರ್ ನಾಗರಾಜು ಮೊದಲಾದವರು ಇದ್ದರು.