ಸಹಕಾರ ಸಂಘಗಳ ಪಾತ್ರ ಬಹುಮುಖ್ಯ- ಲಿಂಬಿಕಾಯಿ


ಧಾರವಾಡ ಎ.18- ಜಿಲ್ಲೆ ಸಹಕಾರ ಕ್ಷೇತ್ರದ ತವರು ಎನಿಸಿಕೊಂಡಿದೆ. ಕರ್ನಾಟಕದಲ್ಲಿ ಸಹಕಾರ ಚಳುವಳಿ, ಆರಂಭವಾದುದು ಧಾರವಾಡ ಜಿಲ್ಲೆಯಲ್ಲಿ ಎಂಬ ಹೆಗ್ಗಳಿಕೆ ನಮ್ಮದಾಗಿದೆ. ಜಿಲ್ಲೆಯ ಸಹಕಾರ ಸಂಸ್ಥೆಗಳು ಉತ್ತಮವಾಗಿ ದಕ್ಷತೆಯಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಹಾಗೆಯೇ ನಿಸ್ವಾರ್ಥ ಸಹಕಾರಿ ಮುಖಂಡರುಗಳನ್ನು ನೀಡಿರುವ ಜಿಲ್ಲೆ ಧಾರವಾಡ ಆಗಿರುತ್ತದೆ ಎಂದು ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾದ ಮೋಹನ ಲಿಂಬಿಕಾಯಿ ಅವರು ನವಲಗುಂದದಲ್ಲಿ ಜರುಗಿದ ನವಲಗುಂದ-ಅಣ್ಣಿಗೇರಿ ತಾಲುಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪದಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಾಹಕರುಗಳ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಸಹಕಾರ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದಾಗ ಸಹಕಾರ ಸಂಸ್ಥೆಗಳು ಹೆಚ್ಚು ಹೆಚ್ಚು ಲಾಭಗಳಿಸಲು ಸಾಧ್ಯ. ಶೂನ್ಯ ಬಡ್ಡಿ ದರದಲ್ಲಿ ಸರ್ಕಾರ ರೈತರಿಗೆ ಸಾಲ ನೀಡುತ್ತಿದ್ದು ಅರ್ಹ ಸದಸ್ಯರಿಗೆ ಸಾಲ ವಿತರಿಸುವಲ್ಲಿ ಕೃಷಿ ಪತ್ತಿನ ಸಹಕಾರ ಸಂಘಗಳ ಪಾತ್ರ ಬಹು ಮುಖ್ಯವಾಗಿರುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ನವಲಗುಂದ ಮಾಜಿ ಶಾಸಕರಾದ ಎನ್.ಎಚ್. ಕೋನರಡ್ಡಿ ಮಾತನಾಡುತ್ತಾ ಭಾರತ ಕೃಷಿ ಪ್ರಧಾನ ದೇಶ, ಇಲ್ಲಿಯ ಹೆಚ್ಚು ಹೆಚ್ಚು ಜನ ಕೃಷಿಯನ್ನೇ ಅವಲಂಬಿಸಿದ್ದಾರೆ. ಸಹಕಾರ ಕ್ಷೇತ್ರ ವಿಶಾಲವಾದ ಕ್ಷೇತ್ರ. ಈ ಕ್ಷೇತ್ರದಿಂದಲೇ ರೈತರ ಅಭಿವೃದ್ಧಿ ಸಾಧ್ಯವೆಂದು ತಿಳಿಸುತ್ತ, ನಮ್ಮ ರಾಷ್ಟ್ರದ ಸಹಕಾರಿ ಚಳುವಳಿ ಬೃಹತ್ತಾಗಿ ಮತ್ತು ಮಹತ್ತಾಗಿ ಬೆಳೆದುಬಂದಿದೆ. ಹಿಂದೆ ಸಮಾಜದ ಎಲ್ಲಾ ರೀತಿಯ ಶೋಷಣೆಯನ್ನು ನಿರ್ಮೂಲಗೊಳಿಸಿ, ಸರ್ವರಿಗೆ ಸಮಪಾಲು, ಸರ್ವರಿಗೆ ಸಮಬಾಳು ಎಂಬ ತತ್ವವನ್ನು ಜಾರಿಗೊಳಿಸುವ ಉದ್ದೇಶದಿಂದ ಆರಂಭವಾದ ಸಹಕಾರ ಚಳುವಳಿ ಇಂದು ನಿರೀಕ್ಷೆ ಮೀರಿ ಬೆಳೆದಿದೆ, ಇನ್ನೂ ಬೆಳೆಯುತ್ತಲಿದೆ ಎಂದರು.
ಮತ್ತೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪಿಕಾರ್ಡ ಬ್ಯಾಂಕ ಅಧ್ಯಕ್ಷರಾದ ದೇಸಾಯಿಗೌಡ ಎಸ್. ಪಾಟೀಲ ಅವರು ಮಾತನಾಡುತ್ತಾ ಕೋಟಿ ಸದಸ್ಯ ಬಳಗ ಹೊಂದಿರುವ ಸಹಕಾರ ಕ್ಷೇತ್ರ ನಮ್ಮದಾಗಿದ್ದು, ಇದು ಪ್ರಪಂಚದಲ್ಲೇ ದೊಡ್ಡ ಪ್ರಮಾಣದ ಮಹತ್ವಪೂರಿತ ಚಳುವಳಿ ಎನಿಸಿಕೊಂಡಿದೆ. ರಾಷ್ಟ್ರದ ರೈತರಿಗೆ ಅಗತ್ಯವಾದ ಕೃಷಿ ಸಾಲ ನೀಡುವುದರಲ್ಲಿ ಸಹಕಾರ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಹಾಗೆಯೇ ಉದ್ಯೋಗ ಸೃಷ್ಟಿಯಲ್ಲಿ ಸಹಕಾರ ಸಂಸ್ಥೆಗಳು ಬಹು ಮುಖ್ಯ ಪಾತ್ರವಹಿಸುತ್ತಲಿವೆ ಎಂದರು.
ಸಭೆಯ ಅಧ್ಯಕ್ಷತೆವಹಿಸಿದ ಯೂನಿಯನ್‍ದ ಅಧ್ಯಕ್ಷ ಹಾಗೂ ಕೆ.ಸಿ.ಸಿ. ಬ್ಯಾಂಕ ಅಧ್ಯಕ್ಷರಾದ ಬಾಪುಗೌಡ ಡಿ. ಪಾಟೀಲ ಅವರು ಸರ್ಕಾರದ ಯೋಜನೆಗಳನ್ನು ಹಾಗೂ ಕಾನೂನುಗಳಲ್ಲಾಗುವ ತಿದ್ದುಪಡಿಗಳನ್ನು ತಿಳಿಸಿಕೊಡುವ ದೃಷ್ಟಿಯಿಂದ ಮಹಾಮಂಡಳದ ಮಾರ್ಗದರ್ಶನದಲ್ಲಿ ಯೂನಿಯನ್ ಮೂಖಾಂತರ ನಡೆಸಲಾಗುವುದು.
ಸದರ ತರಬೇತಿ ಕಾರ್ಯಕ್ರಮದಲ್ಲಿ ಯೂನಿಯನ್‍ದ ನಿರ್ದೇಶಕರಾದ ಸದುಗೌಡ ಎ. ಪಾಟೀಲ, ಹಿರಿಯ ಸಹಕಾರಿಗಳಾದ ಎಂ.ಬಿ. ಮುನೇನಕೊಪ್ಪ, ಲೆಕ್ಕ ಪರಿಶೋಧನಾ ಇಲಾಖೆ ಸಹಾಯಕ ನಿರ್ದೇಶಕರಾದ ಸುಭಾಷ ತಳವಾರ, ಸಹಕಾರ ಅಭಿವೃದ್ಧಿ ಅಧಿಕಾರಿಗಳಾದ ಎಸ್.ವ್ಹಿ. ಶಲವಡಿ, ಕೆ.ಸಿ.ಸಿ. ಬ್ಯಾಂಕ ಪ್ರಧಾನ ವ್ಯವಸ್ಥಾಪಕರಾದ ಎಸ್.ವ್ಹಿ, ಹೂಗಾರ ಅವರುಗಳು ಉಪಸ್ಥಿತರಿದ್ದರು.