ಸಹಕಾರ ಸಂಘಗಳ ಅಭಿವೃದ್ಧಿಯಲ್ಲಿ ಸಿಇಒಗಳ ಪಾತ್ರ ಮುಖ್ಯ

ದಾವಣಗೆರೆ.ಮಾ.18: ಸಹಕಾರ ಸಂಘಗಳ ಅಭಿವೃದ್ಧಿಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಪಾತ್ರ ಪ್ರಮುಖವಾದುದು ಎಂದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ಹಾಲೇಶಪ್ಪ ಹೇಳಿದರು. ನಗರದ ಜನತಾಬಜಾರ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಬೆಂಗಳೂರುಸಹಕಾರ ಇಲಾಖೆ, ದಾವಣಗೆರೆ ಜಿಲ್ಲೆ, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ, ದಾವಣಗೆರೆ ಜಿಲ್ಲೆ ದಾವಣಗೆರೆ ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತ, ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ವತಿಯಿಂದ ಹರಿಹರ, ಹೊನ್ನಾಳಿ, ನ್ಯಾಮತಿ ಮತ್ತು ಜಗಳೂರು ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಾಹಕರುಗಳಿಗೆ ಹಮ್ಮಿಕೊಂಡಿದ್ದ “ಒಂದು ದಿನದ ವಿಶೇಷ “ಕಾರ್ಯದಕ್ಷತೆ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ಸಂಘದ ಮುಖ್ಯಕಾರ್ಯನಿರ್ವಾಹಕರುಗಳು ಅತ್ಯಂತ ಚಾಕಚಕ್ಯತೆಯಿಂದ ಕರ್ತವ್ಯ ನಿರ್ವಹಿಸಿದ್ದರೆ ಮಾತ್ರ ಸಹಕಾರ ಸಂಘಗಳ ಅಭಿವೃದ್ದಿ ಸಾಧ್ಯ ಈ ನಿಟ್ಟಿನಲ್ಲಿ ತರಬೇತಿಯನ್ನು ಪಡೆದುಕೊಳ್ಳುವುದಷ್ಟೇ ಸಾಲದು ತರಬೇತಿಯ ನಂತರ ಅವುಗಳನ್ನು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕ ಕೆ.ಹೆಚ್.ಷಣ್ಮುಖಪ್ಪ ಮಾತನಾಡಿ, ದಾವಣಗೆರೆ ಜಿಲ್ಲೆಯಲ್ಲಿ ಸಹಕಾರ ತರಬೇತಿ ಕೇಂದ್ರದ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷರು ಹಾಗೂ ಹಿರಿಯ ಸಹಕಾರಿಗಳು ಪ್ರಯತ್ನ ಪಡುತ್ತಿರುವುದು ಸಂತಸದ ವಿಷಯ ಎಂದು ತಿಳಿಸಿದರು. ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪನಿರ್ದೇಶಕ ಕೆ.ಮಹೇಶ್ವರಪ್ಪ ಮಾತನಾಡಿ, ಕಾಲಕಾಲಕ್ಕೆ ಬದಲಾದ ಕಾಯ್ದೆ ಕಾನೂನಿನ ತಿದ್ದುಪಡಿಗಳ ಬಗ್ಗೆ ತರಬೇತಿ ಪಡೆಯುವುದರಿಂದ ಕಾರ್ಯದರ್ಶಿಗಳು ಸಂಘದಲ್ಲಿ ಲೆಕ್ಕಪತ್ರ ನಿರ್ವಹಣೆಗೆ ಅನುಕೂಲವಾಗಿ ಸಂಘವು ಲಾಭದತ್ತಸಾಗಲು ಸಾಧ್ಯವಾಗುತ್ತದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಸಿರಿಗೆರೆ ರಾಜಣ್ಣ ಮಾತನಾಡಿ, “ಸಂಘದ ಅಧ್ಯಕ್ಷರು ಹಾಗೂ ಮುಖ್ಯಕಾರ್ಯನಿರ್ವಾಹಕರುಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಸಹಕಾರ ಸಂಘಗಳ ಕಾನೂನು, ನಿಯಮಾವಳಿಗಳ ಬಗ್ಗೆ ಎಷ್ಟು ತಿಳಿದುಕೊಂಡರೂ ಕಡಿಮೆಯೇ. ಆದ್ದರಿಂದ ಜಿಲ್ಲಾ ಸಹಕಾರ ಒಕ್ಕೂಟ ಹಮ್ಮಿಕೊಳ್ಳುವ ಎಲ್ಲಾ ಕಾರ್ಯಕ್ರಮಗಳಲ್ಲೂ ಸಂಘಗಳ ಸಿಇಒಗಳು ತಪ್ಪದೇ ಹಾಜರಾಗಬೇಕು ಎಂದು ತಿಳಿಸಿದರು. ಹೊನ್ನಾಳಿ ತಾಲ್ಲೂಕು ಸಹಕಾರ ಅಭಿವೃದ್ದಿ ಅಧಿಕಾರಿ ಆರ್. ರಮೇಶ್ ಮಾತನಾಡಿದರು ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಎನ್. ಕುಮಾರ್, ಸಹಕಾರ ಸಂಘಗಳ ಹಿರಿಯ ಲೆಕ್ಕಪರಿಶೋಧಕ ಕೆ.ಎಲ್ ಬಸವಂತಪ್ಪ, ಓ. ಮಂಜುಸ್ವಾಮಿ, ಮಂಜುನಾಥ್ ಹಾಗೂ ಸಹಕಾರ ಅಭಿವೃದ್ದಿ ಅಧಿಕಾರಿಗ ವಿ. ಹರೀಶ್‌ಕುಮಾರ್, ಶ್ರೀಮತಿ ಹೆಚ್. ಸುನೀತ, ಸಿಬ್ಬಂದಿಗಳಾದ ವಿ. ರಂಗನಾಥ, ಆರ್. ಸ್ವಾಮಿ ಮತ್ತಿತ್ತರರು ತರಬೇತಿ ಹಾಜರಿದ್ದರು. ಶ್ರೀಮತಿ ಶಿಲ್ಪ ಪ್ರಾರ್ಥಿಸಿದರು ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಹೆಚ್.ಸಂತೋಷ್‌ಕುಮಾರ್ ಸ್ವಾಗತಿಸಿದರು. ಒಕ್ಕೂಟದ ವ್ಯವಸ್ಥಾಪಕ ಕೆ.ಎಂ ಜಗದೀಶ್ ವಂದಿಸಿದರು. ಗುರುರಾಜ್ ಅಂಬೇಕರ್ ಉಪನ್ಯಾಸ ನೀಡಿದರು.