ಸಹಕಾರ ರಂಗದಲ್ಲಿ ಕರ್ನಾಟಕ ಭಾರತದ ತೊಟ್ಟಿಲು: ಶಿವಾಚಾರ್ಯ


ಸಂಜೆ ವಾಣಿ ವಾರ್ತೆ
ಕೊಟ್ಟೂರು:ನ,21-ಭಾರತ ದೇಶವು ವಿಭಿನ್ನತೆಯಲ್ಲಿ ಏಕತೆಯನ್ನು ಕಂಡ ದೇಶವಾಗಿದೆ ಕರ್ನಾಟಕವು ಸಹಕಾರ ರಂಗದಲ್ಲಿ ಭಾರತದ ತೊಟ್ಟಿಲು ಎಂದು ಉಜ್ಜಯಿನಿ ಜಗದ್ಗುರು ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಮಹಾ ಸ್ವಾಮಿಗಳು ತಿಳಿಸಿದರು.
   ಪಟ್ಟಣದ ಗುರುದೇವ ಶಾಲೆಯ ಹಿಂಭಾಗದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಸಹಕಾರ ಮಂಡಳ ಬೆಂಗಳೂರು, ಜಿಲ್ಲಾ ಸಹಕಾರಿ ಯುನಿಯಾನ್ ಹೊಸಪೇಟೆ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹೊಸಪೇಟೆ, ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲಾ ಸಹಕಾರ ಹಾಲು ಒಕ್ಕೂಟ, ಸಹಕಾರ ಇಲಾಖೆ ಬಳ್ಳಾರಿ ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳ ಸಹಭಾಗಿತ್ವದಲ್ಲಿ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹೊಸಪೇಟೆ ಇವರ ಮುಂದಾಳತ್ವದಲ್ಲಿ 69ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟನಾ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು
   ಮನುಷ್ಯನು ಬೇರೆಯವರಿಗೆ ಬದುಕಲು ಬಿಡಬೇಕು ಮನುಷ್ಯನು ಸಹಕಾರದ ತತ್ವದಲ್ಲಿ ನಡೆಯಬೇಕು, ಹಲ್ಲುಗಳು ಹೇಗೆ ನಾಲಿಗೆಗೆ ಸಹಕಾರವನ್ನು ನೀಡುತ್ತದೆಯೋ ಅದೇ ರೀತಿಯಾಗಿ ಮನುಷ್ಯನು ಮನುಷ್ಯರಿಗೆ ಸಹಕಾರ ನೀಡಬೇಕು, ನಮ್ಮ ರಾಜ್ಯದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಸಹಕಾರ ಸಂಸ್ಥೆಗಳಿವೆ, ಸಹಕಾರ ಸಂಸ್ಥೆಗಳು ಆಯಾ ಸಂಘ ಸಂಸ್ಥೆಗಳಿಗೆ ಹತ್ತಿರವಾಗದೆ ಅತ್ಯಂತ ಕೊನೆಯ ವರ್ಗದವರಿಗೆ ಜಾರಿಯಾಗುವಂತೆ ಮಾಡಬೇಕು, ಪಶು ಸಂಗೋಪನೆ, ಹೈನೋಧ್ಯಮ ಈ ಎಲ್ಲಾ ಸಂಸ್ಥೆಗಳು ಸಹಕಾರ ತತ್ವದಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
   ನಂತರ ತಿಪ್ಪೇಸ್ವಾಮಿ ಮಾತನಾಡಿ 69ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ದೇಶಾದ್ಯಂತ ಆಚರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಸಹಕಾರಿ ಯೂನಿಯನ್ ಬ್ಯಾಂಕ್ ನಿರ್ದೇಶಕರಾದ ಅಳವಂಡಿ ಕೊಟ್ರೇಶ್ ಸ್ವಾಗತಿಸಿದರು, ನಿರ್ದೇಶಕರಾದ ನಾಗರಾಜ್ ವಂದಿಸಿದರು.
 ಈ ಕಾರ್ಯಕ್ರಮವನ್ನು  ಹೊಸಪೇಟೆ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಜೆ.ಎಂ ಶಿವಪ್ರಸಾದ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ  ಈಶ್ವರ ಗೌಡ, ಕಲ್ಲೇಶಪ್ಪ, ಸಹಕಾರಿ ಯೂನಿಯನ್ ನ ನಿರ್ದೇಶಕರಾದ ಕೆ ಜಿ ಗೌರಮ್ಮ, ಸಿಡಿಓ ಮಾನಸ, ಬಿಡಿಸಿಸಿ ಬ್ಯಾಂಕ್ ನ ನಿರ್ದೇಶಕರಾದ ಬಿಂಬಿಕಾ ಮತ್ತಿತರರು ವೇದಿಕೆಯಲ್ಲಿದ್ದರು.