ಸಹಕಾರ ಮಹಾಮಂಡಳ ಅಧ್ಯಕ್ಷರಾಗಿ ಜಿಟಿ ದೇವೇಗೌಡ ಆಯ್ಕೆ

ಬೆಂಗಳೂರು,ಏ.೬-ರಾಜ್ಯ ಸಹಕಾರ ಮಹಾಮಂಡಳದ ನಿಯಮಿತದ ನೂತನ ಅಧ್ಯಕ್ಷರಾಗಿ ಹಿರಿಯ ಸಹಕಾರಿ ಹಾಗು ಮಾಜಿ ಸಚಿವ ಜಿ.ಟಿ ದೇವೇಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ,
ಉಪಾಧ್ಯಕ್ಷರಾಗಿ ಜಗದೀಶ್ ಎಂ. ಕವಟಗಿಮಠ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಆಡಳಿತ ಮಂಡಳಿಗೆ ಹೊಸದಾಗಿ ಆಯ್ಕೆಯಾದ ನಿರ್ದೇಶಕರ ಸಭೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ನಡೆಯಿತು.
ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅಫೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್, ಹಿರಿಯ ಸಹಕಾರಿ ಹಾಗು ನಗರ ಪಟ್ಟಣ ಸಹಕಾರ ಮಂಡಳದ ಅಧ್ಯಕ್ಷ ಎಚ್.ಕೆ ಪಾಟೀಲ,ಮಾರುಕಟ್ಟೆ ಮಹಾಮಂಡಳದ ಅಧ್ಯಕ್ಷ ರಾಜೇಂದ್ರ ಕುಮಾರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಜಿ.ಟಿ ದೇವೇಗೌಡ ಅವರು, ಹಿರಿಯ ಸಹಕಾರಿಗಳು ನಮಗೆ ಮಾರ್ಗದರ್ಶನ ಮಾಡಿದ್ದಾರೆ, ಮುಂದೆ ಹೋಗುವ ಹಾದಿ ತೋರಿಸಿದ್ದಾರೆ.ಎಲ್ಲಾ ಸಹಕಾರಿಗಳನ್ನು ಜೊತೆಯಲ್ಲಿ ಕೊಂಡೊಯ್ಯುವ ಮೂಲಕ ಸಹಕಾರ ಕ್ಷೇತ್ರದ ಬಲವರ್ಧನೆಗೆ ಶ್ರಮಿಸುವುದಾಗಿ ತಿಳಿಸಿದ್ದಾರೆ.
ಎಚ್.ಕೆ ಪಾಟೀಲ್, ಮತ್ತು ರಾಜೇಂದ್ರ ಕುಮಾರ್ ಅವರು ವಿವಿಧ ಸಹಕಾರ ಕ್ಷೇತ್ರದ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಅದು ಸಹಕಾರ ಕ್ಷೇತ್ರದ ಶಕ್ತಿ ಎಂದು ಹೇಳಿದರು. ಇತ್ತೀಚೆಗಷ್ಟೇ ರಾಜ್ಯ ಸಹಕಾರ ಮಹಾ ಮಂಡಳಕ್ಕೆ ನೂತನ ನಿರ್ದೇಶಕರ ಆಯ್ಕೆಯಾಗಿತ್ತು.