ಸಹಕಾರ ಮಹಾಮಂಡಳದಿಂದ ಸಾವಿರ ಜನೌಷಧಿ ಮಳಿಗೆ-ಶ್ರೀನಿವಾಸಗೌಡ

ಕೋಲಾರ,ಜ.೧೩: ಸಹಕಾರ ಮಹಾಮಂಡಳದಿಂದ ರಾಜ್ಯಾದ್ಯಂತ ೧ ಸಾವಿರ ಜನೌಷಧಿಮಳಿಗೆಗಳನ್ನು ಸ್ಥಾಪಿಸಲು ನಿರ್ಧರಿಸಿದ್ದು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಮೊದಲ ಆಧ್ಯತೆ ನೀಡುವುದಾಗಿ ಶಾಸಕ ಕೆ.ಶ್ರೀನಿವಾಸಗೌಡ ತಿಳಿಸಿದರು.ತಾಲ್ಲೂಕಿನ ಅರಹಳ್ಳಿ ಸೊಸೈಟಿ ಆಶ್ರಯದಲ್ಲಿ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ವತಿಯಿಂದ ಮಹಿಳಾ ಸಂಘಗಳಿಗೆ ೩.೪೨ ಕೋಟಿ ರೂ ಸಾಲ ವಿತರಿಸಿ ಅವರು ಮಾತನಾಡುತ್ತಿದ್ದರು.
ಅವಿಭಜಿತ ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ಸದೃಢವಾಗಿದ್ದು, ಅತ್ಯಂತ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ, ಬ್ಯಾಂಕಿನ ಅಡಿಯಲ್ಲಿ ಸೊಸೈಟಿಗಳು ಇಂದು ಬಲಿಷ್ಟವಾಗಿರುವುದರಿಂದ ಈ ಎರಡೂ ಜಿಲ್ಲೆಗಳಲ್ಲೇ ಅತಿ ಹೆಚ್ಚು ಜನೌಷಧಿ ಮಳಿಗೆಗಳ ಸ್ಥಾಪನೆಗೆ ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ರಾಜ್ಯದಲ್ಲೇ ಮೊದಲೆನ್ನುವಂತೆ ಮಹಿಳೆಯರಿಗೆ, ರೈತರಿಗೆ ಅತಿ ಹೆಚ್ಚು ಸಾಲ ನೀಡಿದೆ, ಇಂದು ಸೊಸೈಟಿಗಳಲ್ಲೂ ವಹಿವಾಟು ಅತ್ಯಂತ ಉತ್ತಮವಾಗಿದೆ, ಬ್ಯಾಂಕ್ ಸಾಲ ನೀಡುವುದರ ಜತೆಗೆ ಸಾಮಾಜಕ ಕಾಳಜಿಯ ಜನೌಷಧಿ ಮಳಿಗೆಗಳ ಸ್ಥಾಪನೆಗೂ ನೆರವಾಗಲಿದೆ ಎಂದು ತಿಳಿಸಿದರು.
ನಿರುದ್ಯೋಗಿ ಯುವಕರು, ಓರ್ವ ಫಾರ್ಮಸಿಸ್ಟ್ ಶಿಕ್ಷಣ ಪಡೆದವರೊಂದಿಗೆ ಜನೌಷಧಿ ಮಳಿಗೆ ತೆರೆಯಲು ಅವಕಾಶ ನೀಡಲಾಗುವುದು, ಇದರಿಂದ ನಿರುದ್ಯೋಗ ಸಮಸ್ಯೆಗೂ ಪರಿಹಾರ, ಔಷಧಿಗಳು ಅತ್ಯಂತ ಕಡಿಮೆ ದರಕ್ಕೆ ಸಿಗುವುದರಿಂದ ಬಡವರ ಸೇವೆ ಮಾಡಿದಂತೆಯೂ ಆಗಲಿದೆ ಎಂದು ಅಭಿಪ್ರಾಯಪಟ್ಟರು.
ನಮ್ಮ ಕೆಲಸದಿಂದಲೇ
ಟೀಕೆಗಳಿಗೆ ಉತ್ತರ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ದಿವಾಳಿಯಾಗಿದ್ದ ಬ್ಯಾಂಕ್ ಇಂದು ರೈತರು, ಮಹಿಳೆಯರ ಆರ್ಥಿಕ ಪ್ರಗತಿಗೆ ದುಡಿಯುವ ಶಕ್ತಿ ಗಳಿಸುವಂತೆ ಮಾಡಿದ್ದರೂ ಟೀಕೆಗಳು ಕೇಳಿ ಬರುತ್ತಲೇ ಇದೆ ಅದಕ್ಕೆ ನಾವು ಕೆಲಸಗಳಿಂದಲೇ ಉತ್ತರ ನೀಡುತ್ತಿರುವುದಾಗಿ ತಿಳಿಸಿದರು.
ಬ್ಯಾಂಕ್ ಮಾತ್ರವಲ್ಲ ಎರಡೂ ಜಿಲ್ಲೆಗಳ ಎಲ್ಲಾ ಸೊಸೈಟಿಗಳ ಗಣಕೀಕರಣ ಮಾಡಲಾಗಿದೆ, ಮೈಕ್ರೋಎಟಿಎಂ ಜಾರಿಗೆ ತರಲಾಗಿದೆ, ತಾಯಂದಿರು,ರೈತರ ಹಣಕ್ಕೆ ಖಾತ್ರಿ ನೀಡಲಾಗಿದೆ, ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಲಾಗಿದೆ, ಇಷ್ಟರ ನಡುವೆಯೂ ಕೆಲವರು ಟೀಕೆ ಮಾಡುವುದನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ ಎಂದರು.
ಅಂತಹ ಅರ್ಥವಿಲ್ಲದ ಟೀಕೆಗಳಿಗೆ ನಾನು ಉತ್ತರ ನೀಡೋದಿಲ್ಲ, ಬ್ಯಾಂಕ್ ಉಳಿಸಿ ಬೆಳೆಸಿರುವ ತಾಯಂದಿರು,ರೈತರ ಹಿತ ಕಾಯುವ ಸಂಕಲ್ಪದೊಂದಿಗೆ ನನ್ನ ಕೆಲಸವನ್ನು ನಾನು ಪ್ರಾಮಾಣಿಕತೆಯಿಂದ ಮಾಡುತ್ತಾ ಸಾಗುತ್ತೇನೆ ಎಂದರು.
ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ, ಕೋವಿಡ್ ಸಂಕಷ್ಟದಲ್ಲಿ ಹೆಚ್ಚು ಜನರನ್ನು ಒಂದು ಕಡೆ ಸೇರಿಸಬಾರದು ಎಂಬ ನಿಯಮ, ಗ್ರಾ.ಪಂ ಚುನಾವಣೆಯ ನೀತಿ ಸಂಹಿತೆಯಿಂದಾಗಿ ಸಾಲ ವಿತರಣೆ ವಿಳಂಬವಾಗಿದೆ ಆದರೆ ಮುಂದೆ ಅಂತಹ ಸಮಸ್ಯೆಗಳಿಗೆ ಅವಕಾಶ ನೀಡುವುದಿಲ್ಲ ಎಂದರು.
ಅಧಃಪತನವಾಗಿ ಜನರ ಮನಸ್ಸಿನಿಂದಲೇ ಮರೆಯಾಗಿದ್ದ ಡಿಸಿಸಿಬ್ಯಾಂಕ್ ಇಂದು ಮನೆಮನೆಮಾತಾಗಿದೆ, ಪ್ರತಿ ಕುಟುಂಬಕ್ಕೂ ಸಾಲ ನೀಡುವ ಆಶಯದೊಂದಿಗೆ ನಮ್ಮ ಆಡಳಿತ ಮಂಡಳಿ ಕೆಲಸ ಮಾಡುತ್ತಿದೆ, ಮಹಿಳೆಯರ ಆರ್ಥಿಕ ಪ್ರಗತಿಗೆ ನೆರವಾಗುತ್ತಿದ್ದೇವೆ ಎಂದರು.
ನಿರ್ದೇಶಕ ಕೆ.ವಿ.ದಯಾನಂದ್, ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ಮಾತ್ರವಲ್ಲ ಸೊಸೈಟಿಗಳ ಜೀವ ಕಳೆದುಕೊಂಡಿದ್ದವು, ಈಗ ಪಡಿತರಕ್ಕೆ ಸೀಮಿತವಾಗಿದ್ದ ಸೊಸೈಟಿಗಳು ಕೋಟಿಗಟ್ಟಲೆ ವಹಿವಾಟು ನಡೆಸುತ್ತಿವೆ, ಇದಕ್ಕೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯ ಪ್ರಾಮಾಣಿಕ ಶ್ರಮವೇ ಕಾರಣ ಎಂದರು. ಕಾರ್ಯಕ್ರಮದಲ್ಲಿ ಅರಹಳ್ಳಿ ಸೊಸೈಟಿ ಅಧ್ಯಕ್ಷ ವೆಂಕಟೇಶಪ್ಪ, ನಿರ್ದೇಶಕರಾದ ಬಾಬುಮೌನಿ, ಚಲಪತಿ,ಲಕ್ಷ್ಮಮ್ಮ, ರೂಪ, ಮಾಜಿ ಅಧ್ಯಕ್ಷ ಕೃಷ್ಣಪ್ಪ, ಸಿಇಒ ಹರೀಶ್ ಮತ್ತಿತರರಿದ್ದರು.