ಸಹಕಾರ ಬ್ಯಾಂಕ್‍ನಿಂದ ರೈತರಿಗೆ ಸಾಲ ವಿತರಣೆಯಲ್ಲಿ ತಾರತಮ್ಯ: ಏ. 10ರೊಳಗೆ ಸರಿಪಡಿಸಲು ಮಮಶೆಟ್ಟಿ ಆಗ್ರಹ

ಕಲಬುರಗಿ,ಏ.3: ಜಿಲ್ಲಾ ಸಹಕಾರ ಬ್ಯಾಂಕ್‍ನಿಂದ ರೈತರಿಗೆ ಸಾಲ ವಿತರಣೆಯಲ್ಲಿ ತಾರತಮ್ಯವಾಗಿದ್ದು, ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಇದೇ ಏಪ್ರಿಲ್ 10ರೊಳಗೆ ಅನ್ಯಾಯ ಸರಿಪಡಿಸಬೇಕು. ಇಲ್ಲವಾದಲ್ಲಿ ಹೋರಾಟ ರೂಪಿಸುವುದಾಗಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅವರು ಎಚ್ಚರಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ನೆಟೆ ರೋಗದಿಂದ ಬೆಳೆ ಹಾಳಾಗಿ ರೈತರು ಪರದಾಡುತ್ತಿದ್ದಾರೆ. ಹೈನುಗಾರಿಕೆ ಸಾಲ ಮಂಜೂರಾದ ಎಲ್ಲ ರೈತರಿಗೆ ಮತ್ತು ಬೆಳೆ ಸಾಲ ಮಂಜೂರು ಆದ ಎಲ್ಲ ರೈತರಿಗೆ ಸರಳವಾಗಿ ಸಾಲ ಕೊಡದೇ ಕುಂಟುನೆಪ ಹೇಳುತ್ತಿರುವುದು ಜಿಲ್ಲಾ ಸಹಕಾರ ಬ್ಯಾಂಕ್ ರೈತ ವಿರೋಧಿ ನೀತಿ ಹೊಂದಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಜಿಲ್ಲಾ ಸಹಕಾರ ಬ್ಯಾಂಕ್ ರೈತರಿಗೆ ಸಾಲ ಮಂಜೂರು ಮಾಡಿ ಸಾಲ ಕೊಡಲಾರದೆ ಪಹಣಿಯಲ್ಲಿ ಭೋಜಾ ಏರಿಸಿ ಮತ್ತು ರೈತರ ಕೈಗೆ ಹಣ ಸಿಗಲಾರದ ರೀತಿಯಲ್ಲಿ ಸಾಲ ಮಂಜೂರಾದ ರೈತರಿಗೆ ಅವರ ಖಾತೆಗೆ ಹಣ ಜಮೆ ಮಾಡಲಾರದೇ ರೈತರ ಮೇಲೆ ಹೊರೆ ಹಾಕುತ್ತಿದೆ. ಆದಾಗ್ಯೂ, ರೈತರ ಬಡ್ಡಿ ಬೆಳೆಯುತ್ತಿದೆ. ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ರಾಜಕುಮಾರ್ ಪಾಟೀಲ್ ತೆಲ್ಕೂರ್ ಅವರು ತಮ್ಮ ಸೇಡಂ ತಾಲ್ಲೂಕಿಗೆ ಹೆಚ್ಚು ಸಾಲ ಕೊಡುವ ಮೂಲಕ ಉಳಿದ ತಾಲ್ಲೂಕುಗಳಿಗೆ ಮಲತಾಯಿ ಧೋರಣೆ ಮಾಡಿದ್ದಾರೆ. ಹೈನುಗಾರಿಕೆ ಸಾಲವನ್ನು ಕೊಡದೇ ಇರುವುದರಿಂದ ರೈತರು ಬೇಸತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ನಬಾರ್ಡ್ ಬ್ಯಾಂಕ್‍ನವರು ಅಪೆಕ್ಸ್ ಬ್ಯಾಂಕಿಗೆ ಸಾಲ ಕೊಡುತ್ತಾರೆ. ಅಪೆಕ್ಸ್ ಬ್ಯಾಂಕ್‍ನವರು ಬ್ಯಾಂಕುಗಳಿಗೆ ಸಾಲ ಕೊಡುತ್ತಾರೆ. ಆದಾಗ್ಯೂ, ಜಿಲ್ಲಾ ಸಹಕಾರ ಬ್ಯಾಂಕಿನವರು ಬ್ಯಾಂಕಿನಲ್ಲಿ ನೂರಾರು ಕೋಟಿ ರೂ.ಗಳ ಸಾಲ ಪಡೆದು ಮರಳಿ ಅಪೆಕ್ಸ್ ಬ್ಯಾಂಕಿನಲ್ಲಿ ತಂದ ಸಾಲ ಕಟ್ಟದೇ ಉಳಿದು ಬ್ಯಾಂಕಿನವರು ಮಾಡಿದ ತಪ್ಪಿನಿಂದ ರೈತರಿಗೆ ಮೋಸವಾಗಿದೆ. 2017-2018ರ ಸಾಲಿನಲ್ಲಿ ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ. ಮನ್ನಾ ಆದ ಹಣ ರೈತರಿಗೆ ದೊರಕಿಲ್ಲ. ಸಾಲ ಮನ್ನಾ ಆದ ಹಣ ನೇರವಾಗಿ ಅಪೆಕ್ಸ್ ಬ್ಯಾಂಕಿನವರು ಜಿಲ್ಲಾ ಸಹಕಾರ ಬ್ಯಾಂಕ್ ಸಾಲ ಮಾಡಿದ ಹಣ ಮುರಿದು ಹಾಕಿ ಬಹುತೇಕ ಜನ ರೈತರಿಗೆ ಸಾಲ ಮನ್ನಾದಿಂದ ವಂಚಿತವಾಗಿದ್ದಾರೆ. ರೈತರ ಕಣ್ಣಿಗೆ ಒಂದು ಕಡೆಗೆ ಸುಣ್ಣ, ಇನ್ನೊಂದು ಕಡೆಗೆ ಬೆಣ್ಣೆ ಹಚ್ಚಿದಂತಾಗಿದೆ ಎಂದು ಅವರು ಕಿಡಿಕಾರಿದರು.
ಕಳೆದ 2020-2021ರ ಹಾಗೂ 2022ರ ಸಾಲಿನಲ್ಲಿ ರೈತರ ಕಣ್ಣಿಗೆ ಮಣ್ಣೆರಚಿ ಜಿಲ್ಲೆಯಾದ್ಯಂತ ಜಿಲ್ಲಾ ಸಹಕಾರ ಬ್ಯಾಂಕ್ ಜಿಲ್ಲೆಯಲ್ಲಿರುವ ಸೊಸೈಟಿಗಳಿಗೆ ಪ್ರತಿಯೊಂದು ಸೊಸೈಟಿಗೆ ಕಟ್ಟಡ ನಿಧಿ ಹಣ ಸಂಗ್ರಹಿಸಿ ಗ್ರಾಮೀಣ ಪ್ರದೇಶದ ಜನರಿಗೆ ಅನ್ಯಾಯ ಮಾಡಿದೆ. ಕೂಡಲೇ ನ್ಯಾಯ ಕೊಡಬೇಕು ಎಂದು ಒತ್ತಾಯಿಸಿದ ಅವರು, ಜಿಲ್ಲಾ ಸಹಕಾರ ಬ್ಯಾಂಕ್‍ನಿಂದ ಹೊಸದಾಗಿ ರೈತರಿಗೆ ಸಾಲ ಕೊಡಬೇಕು ಎಂದು ಆಗ್ರಹಿಸಿದರು.
ಸಾಲ ಮಂಜೂರು ಆದ ರೈತರಿಗೆ ಜಿಎಸ್‍ಟಿ ಮುರಿದುಕೊಂಡು ರೈತರಿಗೆ ಹೊರೆ ಹಾಕುತ್ತಿರುವುದು ರೈತ ವಿರೋಧಿ ನೀತಿಯಾಗಿದೆ. ಕೂಡಲೇ ಜಿಎಸ್‍ಟಿ ಹೇರಿಕೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದ ಅವರು, ಕೂಡಲೇ ಬೇಡಿಕೆಗಳನ್ನು ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಬಗೆಹರಿಸಬೇಕು. ಇಲ್ಲದೇ ಹೋದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಸಹಕಾರ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಮುಂದೆ ಪ್ರತಿಭಟನೆ ರೂಪಿಸಲಾಗುತ್ತದೆ ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಡಾ. ಸಾಯಬಣ್ಣ ಗುಡಬಾ, ಸುಭಾಷ್ ಜೇವರ್ಗಿ, ಜಾವೇದ್ ಹುಸೇನ್, ದಿಲೀಪಕುಮಾರ್ ನಾಗೂರೆ, ರಾಯಪ್ಪ ಹುರಮುಂಜಿ, ಪ್ರಕಾಶ್ ಜಾನೆ ಮುಂತಾದವರು ಉಪಸ್ಥಿತರಿದ್ದರು.