ಕೋಲಾರ ಸೆ,೨೨-ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ನಿಯಮಿತವು ಕಳೆದ ಮಾರ್ಚ್ ೩೧ಕ್ಕೆ ಸಾಲ ವಸೂಲಾತಿಯಲ್ಲಿ ಶೇ.೭೪.೬೧ರಷ್ಟು ಪ್ರಗತಿಯಲ್ಲಿದ್ದು ಕೋಲಾರ-ಚಿಕ್ಕಬಳ್ಳಾಪುರ ಎರಡು ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿರುವುದು ಹಾಗೂ ಪ್ರಸಕ್ತ ಸಾಲಿನಲ್ಲಿ ಬ್ಯಾಂಕ್ ೧೧ ಲಕ್ಷ ಲಾಭದಾಯಕವಾಗಿದೆ ಎಂದು ಅಧ್ಯಕ್ಷ ಬೊಮ್ಮಸಂದ್ರ ಹೆಚ್.ಕೃಷ್ಣೇಗೌಡ ತಿಳಿಸಿದರು.
ನಗರದ ರಂಗಮಂದಿರದಲ್ಲಿ ೨೦೨೨-೨೩ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲರ ಸಲಹೆಯ ಮೇರೆಗೆ ಜನಪ್ರತಿನಿಧಿಗಳ ಅನುದಾನ ಬಳಸಿಕೊಂಡು ನೂತನ ಬ್ಯಾಂಕ್ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಸಹಕಾರ ಕ್ಷೇತ್ರದಲ್ಲಿ ರಾಜಕಾರಣ ಬದಿಗೆ ಸರಿಸಿ ದಾಖಲಾತಿಗಳು ಸಮರ್ಪಕವಾಗಿದ್ದರೆ ಪಕ್ಷಾತೀತವಾಗಿ ಸಾಲ ಸೌಲಭ್ಯ ಕಲ್ಪಿಸಲಾಗುವುದು. ಬ್ಯಾಂಕಿನ ಹಿತ ದೃಷ್ಟಿಯಿಂದ ಸುಧಾರಣೆ ಮಾಡಲು ಎಲ್ಲರ ಸಲಹೆಗಳನ್ನು ಸ್ವೀಕರಿಸಿ ಸಾಧಕ ಭಾಧಕಗಳನ್ನು ಚರ್ಚಿಸಿ ಮುಂದುವರೆಯಲಾಗುವುದು ಎಂದರು.
ನಿಕಟಪೂರ್ವ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ವಿಟಪ್ಪನಹಳ್ಳಿ ವೆಂಕಟೇಶ್ ಮಾತನಾಡಿ, ಕಳೆದ ೧೯೩೫ರಲ್ಲಿ ಪಿ.ಎಲ್.ಡಿ. ಬ್ಯಾಂಕ್ ಸ್ಥಾಪನೆ ಮಾಡಲಾಯಿತು, ಶ್ರೀನಿವಾಸಚಾರ್ ಪ್ರಥಮ ಅಧ್ಯಕ್ಷರಾಗಿದ್ದು ನಂತರದಲ್ಲಿ ರಾಜ್ಯದ ಪ್ರಥಮ ಮುಖ್ಯ ಮಂತ್ರಿ ದಿಕೆ.ಸಿ.ರೆಡ್ಡಿ, ಸಚಿವ ದಿ||ಸಿ.ಬೈರೇಗೌಡ, ರೈತರ ಹೋರಾಟಗಾರು ಹಾಗೂ ಶಾಸಕರಾದ ಪಿ.ವೆಂಕಟಗಿರಿಯಪ್ಪ ಸೇರಿದಂತೆ ಹಿರಿಯ ದುರೀಣರ ಹಾದಿಯಲ್ಲಿ ನಡೆದು ಬಂದ ಸಂಸ್ಥೆಯಾಗಿದೆ ಎಂದರು.
ರಾಜ್ಯ ಬ್ಯಾಂಕಿನ ನಿರ್ದೇಶಕ ಯಲವಾರ ಸೊಣ್ಣೇಗೌಡ ಮಾತನಾಡಿ,ಶೇ.೭೪ರಷ್ಟು ವಸೂಲಾತಿ ಮಾಡಿದ್ದರೂ ಸಹ ಶೇ.೮೦ ರಷ್ಟು ವಸೂಲಾತಿ ಮಾಡ ಬೇಕೆಂದು ರಾಜ್ಯ ಬ್ಯಾಂಕ್ ಮತ್ತು ನಬಾರ್ಡ್ ಸೂಚನೆಗಳನ್ನು ನೀಡಿದೆ ಎಂದರು.
ಬ್ಯಾಂಕಿನ ಉಪಾಧ್ಯಕ್ಷ ಗೋವಿಂದಪ್ಪ ಕೆ.ಎಂ.ನಿರ್ದೇಶಕರಾದ ಶಶಿಧರ್.ವಿ.ಎ, ಎ.ಶಿವಕುಮಾರ್, ಬೈರೇಗೌಡ ಟಿ.ಕೆ, ಕೆ.ಸಿ.ಮಂಜುನಾಥ್, ಚಿಕ್ಕಹಸಾಳ ಮಂಜುನಾಥ್.ಎಂ, ಅಮರೇಶ್.ಜಿ, ರಾಧಾಕೃಷ್ಣ, ಜೆ.ಎಂ.ಗಂಗಪ್ಪ, ಶೋಭ ಬಿ.ಎನ್. ಸುನಂದಮ್ಮ, ಸವಿತಾ ಹೆಚ್.ಎಸ್, ಹಿರಿಯ ಸಹಕಾರಿಗಳಾದ ಎನ್.ಜಿ.ಬ್ಯಾಟಪ್ಪ, ಛತ್ರಕೋಡಿಹಳ್ಳಿ ರಾಮಕೃಷ್ಣಪ್ಪ, ಸಿಎಂಆರ್ ಶ್ರೀನಾಥ್, ಟಮಕ ವೆಂಕಟೇಶಪ್ಪ, ಕಲ್ಲಂಡೂರು ಕೃಷ್ಣಪ್ಪ, ಹರಟಿ ವೆಂಕಟರಾಮೇಗೌಡ, ಅಟೋನಾರಾಯಣಸ್ವಾಮಿ, ಕೆಂಬೋಡಿ ನಾರಾಯಣಸ್ವಾಮಿ ಇದ್ದರು.
ಬ್ಯಾಂಕಿನ ವ್ಯವಸ್ಥಾಪಕ ಎಸ್. ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿ ವಾರ್ಷಿಕ ವರದಿ ಮಂಡಿಸಿದರು, ಮಾಜಿ ಅಧ್ಯಕ್ಷ ವೆಂಕಟೇಶ್ ಸ್ವಾಗತಿಸಿದರು.