ಸಹಕಾರ ಕ್ಷೇತ್ರದ ಅಧ್ಯಯನ ಕಾರ್ಯಕ್ಕೆ ಸ್ವಾಗತ: ರಾಜೇಂದ್ರ ಕುಮಾರ್

ಮಂಗಳೂರು, ಮಾ.೨೪- ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಸಹಕಾರ ಕ್ಷೇತ್ರದ ಪಾತ್ರ ಮಹತ್ವ ಪೂರ್ಣವಾಗಿದೆ. ಸಹಕಾರ ರಂಗದ ಪ್ರತಿಯೊಂದು ಸಹಕಾರ ಸಂಸ್ಥೆಯು ಇಂದು ಸಮಗ್ರವಾದ ಅಭಿವೃದ್ಧಿಯನ್ನು ಹೊಂದಿದೆ. ಸಾಮಾಜಿಕವಾಗಿ ಸಹಕಾರ ಕ್ಷೇತ್ರಕ್ಕೆ ದೊರೆತಿರುವ ಮಾನ್ಯತೆಗೆ ತಕ್ಕುದಾಗಿ ಸರಕಾರದ ಮಟ್ಟದಲ್ಲಿ ಸೂಕ್ತ ಮಾನ್ಯತೆಯ ಅವಶ್ಯಕತೆ ಇದೆ. ಈ ಹಿನ್ನಲೆಯಲ್ಲಿ ಸಹಕಾರ ಕ್ಷೇತ್ರದಲ್ಲಿ ಅಧ್ಯಯನ ಮತ್ತು ಸಹಕಾರ ಕ್ಷೇತ್ರದ ಅಭಿವೃದ್ಧಿಯ ಅವಶ್ಯಕತೆಯನ್ನು ಮನಗಂಡು ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆಯ ಸ್ಥಾಪೆನೆಯಾಗಿದೆ. ದೇಶದಲ್ಲಿಯೇ ಪ್ರಪ್ರಥಮವಾಗಿ ಸ್ಥಾಪನೆಯಾಗಿರುವ ಈ ಸಂಸ್ಥೆಯ ಧ್ಯೇಯ ಉದ್ದೇಶಗಳು ಯಶಸ್ವಿಯಾಗಿ ಈಡೇರಲಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಅಧ್ಯಕ್ಷರಾದ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರು ಶುಭ ಹಾರೈಸಿದರು. ಅವರು ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆಯ ಉದ್ಘಾಟಿಸಿ ಸಮಾರಂಭವನ್ನು ಉದ್ದೇಶಿಸಿ ಮಾತಾಡುತ್ತಿದ್ದರು.

ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಹರೀಶ್ ಆಚಾರ್ಯ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಕಾರ ತತ್ವವು ಜಾತ್ಯಾತೀತ, ಧರ್ಮಾತೀತ, ಪಕ್ಷಾತೀತ, ಲಿಂಗಾತೀತ ಮಾತ್ರವಲ್ಲದೇ ಯಾವುದೇ ವೈಚಾರಿಕ ಅಸ್ಪೃಶ್ಯತೆಯೂ ಇರದೇ ಇರುವ ಗುಣ ಲಕ್ಷಣಗಳನ್ನು ಹೊಂದಿರುವ ಆದರ್ಶ ತತ್ವವಾಗಿದೆ. ಈ ತತ್ವದಡಿ ಸುಮಾರು ೧೧೫ ವರ್ಷಗಳ ಹಿಂದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸ್ವರೂಪದಲ್ಲಿ ಪ್ರಾರಂಭವಾಗಿರುವ ಈ ಕ್ಷೇತ್ರ ಇಂದು ಸಮಾಜ ಎಲ್ಲಾ ಕ್ಷೇತ್ರಗಳಲ್ಲಿಯೂ ಸಮಗ್ರವಾಗಿ ಬೆಳೆದಿದೆ. ಗ್ರಾಮೀಣ ಭಾಗಗಳಿಗೆ ಮಾತ್ರ ಸೀಮಿತವಾಗಿರದೇ ಸಮಾಜದ ಎಲ್ಲಾ ಕ್ಷೇತ್ರಗಳಿಗೂ ಪಸರಿಸಿದೆ. ಜಿಲ್ಲಾ ಕೇಂದ್ರ ಸರಕಾರ ಬ್ಯಾಂಕುಗಳು, ಅಪೆಕ್ಸ್‌ಗಳಂತಹ ಪ್ರಾತಿನಿಧಿಕ ಸಂಸ್ಥೆಗಳು ಮಾತ್ರವಲ್ಲದೇ ಅಮೂಲ್, ನಂದಿನಿ, ಇಪ್ಕೋ, ಕ್ಯಾಂಪ್ಕೋದಂತಹ ಸಂಸ್ಥೆಗಳು ಸಹಕಾರ ಕ್ಷೇತ್ರದ ಮಹತ್ವವನ್ನು ಅಂತಾರಾಷ್ಟ್ರೀಯವಾಗಿಸಿದೆ. ಈ ಹಿನ್ನಲೆಯಲ್ಲಿ ಸಹಕಾರ ಕ್ಷೇತ್ರವನ್ನು ಸರಕಾರದ ನೀತಿ ನಿರೂಪಕ ಮಂಡಳಿಯು ವಿಶೇಷವಾಗಿ ಪರಿಗಣ ಸ ಬೇಕಾಗಿದೆ. ಹೀಗಾಗಿ ಈ ಕ್ಷೇತ್ರದ ಸಮಗ್ರ ಅಧ್ಯಯನ ಮತ್ತು ಸಂಶೋಧನೆಗಳಿಂದ ಸಹಕಾರ ಕ್ಷೇತ್ರದ ಅಭಿವೃದ್ಧಿಯ ಕಾರ್ಯಕ್ರಮಗಳನ್ನು ಯೋಜಿಸಬೇಕಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾದ ಶ್ರೀ ಕೆ. ರವಿರಾಜ ಹೆಗ್ಡೆ, ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕಿಶೋರ್ ಕುಮಾರ್ ಕೊಡ್ಗಿ, ಸಹಕಾರ ಭಾರತಿಯ ರಾಜ್ಯ ಅಧ್ಯಕ್ಷರಾದ ಶ್ರೀ ಎಸ್.ಆರ್. ಸತೀಶ್ಚಂದ್ರ, ಕರ್ನಾಟಕ ರಾಜ್ಯ ಸಂಯುಕ್ತ ಸೌಹಾರ್ದ ಸಹಕಾರಿಯ ನಿರ್ದೇಶಕರಾದ           ಶ್ರೀ ಮಂಜುನಾಥ ಎಸ್.ಕೆ. ಇವರು ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಂಸ್ಥೆಯ ಕಾರ್ಯಗಳಿಗೆ ಶುಭ ಕೋರಿದರು.

ಸಂಸ್ಥೆಯ ಟ್ರಸ್ಟೀಗಳಾದ ಶ್ರೀ ಬೆಳುವಾಯಿ ಸೀತಾರಾಮ ಆಚಾರ್ಯ ಮತ್ತು ಶ್ರೀ ವಸಂತ್ ಅಡ್ಯಂತಾಯ ಮತ್ತು ಸಂಸ್ಥೆಯ ಕಾರ್ಯದರ್ಶಿ ಶ್ರೀ ಜಿತಿನ್ ಜಿಜೋ ಉಪಸ್ಥಿತರಿದ್ದರು. ಶ್ರೀಮತಿ ಅಕ್ಷತಾ ಬೈಕಾಡಿ ಕಾರ್ಯಕ್ರಮ ನಿರೂಪಿಸಿದರು.