ಸಹಕಾರ ಕ್ಷೇತ್ರಕ್ಕೆ ನವಚೈತನ್ಯ ತುಂಬಿದ ನಾಗಮಾರಪಳ್ಳಿ : ಬಸವಲಿಂಗ ಪಟ್ಟದೇವರು

ಔರಾದ : ಸೆ.18:ವಿನೂತನ ಯೋಜನೆಗಳ ಮೂಲಕ ಸಹಕಾರ ಕ್ಷೇತ್ರಕ್ಕೆ ನವಚೈತನ್ಯ ತುಂಬಿ ಸಾವಿರಾರು ಕುಟುಂಬಗಳಿಗೆ ಸ್ವಾವಲಂಬಿ ಜೀವನ ನಡೆಸಲು ಅವಕಾಶ ಕಲ್ಪಿಸಿದ ಉಮಾಕಾಂತ ನಾಗಮಾರಪಳ್ಳಿ ಕಾಣಿಕೆ ಅಮೋಘವಾಗಿದೆ ಎಂದು ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ನುಡಿದರು.

ಪಟ್ಟಣದ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ರಾಜ್ಯ ಸಹಕಾರ ಮಾರಾಟ ಮಂಡಳಿ ನಿರ್ದೇಶಕರಾಗಿ ಆಯ್ಕೆಯಾದ ಬೀದರ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಸಹಕಾರ ಸಂಘಗಳಿಗೆ ಶಕ್ತಿ ತುಂಬಿದ ಕುಟುಂಬ :
ದಿವಂಗತ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಅವರು ಸಹಕಾರ ಕ್ಷೇತ್ರದಲ್ಲಿ ಅವಿಸ್ಮರಣಿಯ ಕಾಣಿಕೆಯಿತ್ತವರು, ಅವರ ಹೆಜ್ಜೆಯಲ್ಲಿಯೇ ಉಮಾಕಾಂತ ನಾಗಮಾರಪಳ್ಳಿ ಹಾಗೂ ಸೂರ್ಯಕಾಂತ ನಾಗಮಾರಳ್ಳಿ ಕೆಲಸ ಮಾಡುತ್ತಿರುವುದು ಅತೀವ ಸಂತಸ ತಂದಿದೆ ಎಂದರು.

ಬಡವರ ಬಾಳಿನ ಬೆಳಕಾಗಿ, ಅನೇಕ ಕುಟುಂಬಗಳ ಆಶಾಕಿರಣವಾಗಿದ್ದ ದಿವಂಗತ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಅವರಂತೆ ಬಡವರ ಕಲ್ಯಾಣಕ್ಕಾಗಿ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಈ ಕುಟುಂಬ ಬ್ಯಾಂಕ್, ಆಸ್ಪತ್ರೆ ಹಾಗೂ ಇನ್ನಿತರ ಕ್ಷೇತ್ರಗಳಿಗೆ ತನ್ನದೇಯಾದ ರೀತಿಯಲ್ಲಿ ಕಾಣಿಕೆ ನೀಡುತ್ತಿರುವುದು ಅಭಿನಂದನಾರ್ಹ ಎಂದರು.

ಜನರ ಪ್ರೀತಿಗೆ ಚಿರಋಣಿ :
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಿಸಿಸಿ ಬ್ಯಾಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ, ತಾಲೂಕಿನ ಜನತೆಯ ಸಹಕಾರದಿಂದಲೇ ಇಂದು ನಾನು ಈ ಸ್ಥಾನದಲ್ಲಿರಲು ಸಾಧ್ಯವಾಗಿದೆ. ರಾಜಕೀಯವಾಗಿ ಸಹಕಾರ ಕ್ಷೇತ್ರವನ್ನು ಮುನ್ನಡೆಸಲು ಶಕ್ತಿ ತುಂಬಿದ ಸಾರ್ವಜನಿಕರ ಪ್ರೀತಿಗೆ ಸದಾ ಋಣಿಯಾಗಿರುವೆ.

ಯುವ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿ, ತಂದೆಯ ಆದರ್ಶಗಳಿಟ್ಟುಕೊಂಡು ಬದುಕುತ್ತಿರುವ ನಾವುಗಳು ಸದಾ ಅವರು ತೋರಿದ ದಾರಿಯಲ್ಲಿಯೇ ನಡೆಯುವೆವು. ತಮ್ಮೆಲ್ಲರ ಪ್ರೀತಿಯ ಪೆÇ್ರೀತ್ಸಾಹ ಸದಾ ನಮ್ಮ ಕುಟುಂಬದ ಜೊತೆಯಿರಲಿ ಎಂದರು.

ಈ ಸಂದರ್ಭದಲ್ಲಿ ನಾಗಮಾರಪಳ್ಳಿ ಗ್ರಾಮದ ಬಸವರಾಜ ಹೆಬ್ಬಾಳೆ ವೇದಿಕೆ ಮೇಲೆ ಉಪಸ್ಥಿತರಿದ್ದರು.

ನಾಗಮಾರಪಳ್ಳಿ, ಚಿಂತಾಕಿ, ಎಕಲಾರ್, ಬರದಾಪೂರ್, ತುಳಜಾಪೂರ್, ನಾಗನಪಲ್ಲಿ, ವಡಗಾಂವ, ದಾಪಕಾ, ಕಮಲನಗರ, ಬೇಂಬ್ರಾ ಠಾಣಾ ಕುಶನೂರ್, ಬೇಲ್ದಾಳ, ಉಜನಿ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ನೂರಾರು ಅಭಿಮಾನಿಗಳು ತಂಡೊಪತಂಡವಾಗಿ ಪಾಲ್ಗೊಂಡಿದ್ದರು.


ಪಟ್ಟಣದಲ್ಲಿ ಭವ್ಯ ಮೆರವಣಿಗೆ :
ಪಟ್ಟಣದ ಪ್ರಮುಖ ರಸ್ತೆಯ ಮೇಲೆ ನಾಗಮಾರಪಳ್ಳಿ ಸಹೋದರರ ಭವ್ಯ ಮೆರವಣಿಗೆ ನಡೆಯಿತು. ಅಮರೇಶ್ವರ ದೇವಸ್ಥಾನದಿಂದ ನಾಗಮಾರಪಳ್ಳಿ ಕಲ್ಯಾಣ ಮಂಟಪದ ವರೆಗೂ ವಿವಿಧ ಕಲಾ ತಂಡಗಳ ಜೊತೆಗೆ ಮೆರವಣಿಗೆ ನೆರವೇರಿತು. ದಾರಿಯುದ್ದಕ್ಕೂ ತಾಲೂಕಿನ ಅಭಿಮಾನಿ ಬಳಗದಿಂದ ಹೂಮಳೆ ಸುರಿದು ಅಭಿನಂದನೆ ಸಲ್ಲಿಸಿದ್ದು, ಕನ್ನಡಾಂಬೆ ವೃತ್ತದಲ್ಲಿ ಎರಡು ಜೆಸಿಬಿಗಳ ಮೂಲಕ ಹೂಮಳೆಗೈದು ಸ್ವಾಗತಿಸಿದ್ದು, ಆಕರ್ಷಣಿಯವಾಗಿತ್ತು.